ವಿಟ್ಲ: ಇತಿಹಾಸ ಪ್ರಸಿದ್ದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಜಾತ್ರ ಪ್ರಯುಕ್ತ ನಡೆಯುವ ಕೋಳಿ ಅಂಕಕ್ಕೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗರವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಅಡ್ಡಿಪಡಿಸಿದ ಘಟನೆ ಡಿ.20ರಂದು ಮಧ್ಯಾಹ್ನ ನಡೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಸ್ಥಳಕ್ಕಾಗಮಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಸ್ಥಳದಲ್ಲಿ ಕುಳಿತು ಕೋಳಿ ಅಂಕ ನಡೆಸುವಂತೆ ಸೂಚನೆ ನೀಡಿದ ಘಟನೆಯೂ ನಡೆದಿದೆ.

ಜಿಲ್ಲೆಯಲ್ಲಿ ಪ್ರಸಿದ್ದಿ ಹೊಂದಿದ ಕಾರಣಿಕ ಕ್ಷೇತ್ರಗಳಲ್ಲಿ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರವೂ ಒಂದಾಗಿದೆ. ಧಾರ್ಮಿಕ ನಂಬಿಕೆಯಲ್ಲಿ ಯಾವುದೇ ಜೂಜುಗಳಿಲ್ಲದೆ ನಡೆಯುವ ಅಲ್ಲಿನ ಕೋಳಿ ಅಂಕವೂ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿನ ಕೋಳಿ ಅಂಕದ ಎಲ್ಲಾ ವ್ಯವಸ್ಥೆಗಳೂ ಉಚಿತವಾಗಿ ಸೇವಾ ರೂಪದಲ್ಲಿ ಮಾಡಿಕೊಡಲಾಗುತ್ತಿದೆ. ಎಂದಿನಂತೆ ಈ ವರ್ಷವೂ ಧ್ವಜಾರೋಹಣದ ಬಳಿಕ ಡಿ.20ರಂದು ಮಧ್ಯಾಹ್ನ ಕೋಳಿ ಅಂಕ ಆರಂಭವಾಗಿತ್ತು. ಮೂರು ಗಂಟೆ ಸುಮಾರಿಗೆ ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಪ್ರಕಾಶ್ ದೇವಾಡಿಗರವರ ನೇತೃತ್ವದ ಪೊಲೀಸರ ತಂಡ ಏಕಾಏಕಿ ದಾಳಿ ನಡೆಸಿ ಕೋಳಿ ಅಂಕವನ್ನು ನಿಲ್ಲಿಸಲು ಸೂಚನೆ ನೀಡಿತ್ತು. ಈ ವೇಳೆ ಅಲ್ಲಿದ್ದ ಜನರು ಕಕ್ಕಾಬಿಕ್ಕಿಯಾಗಿ ಓಟಕ್ಕಿತ್ತ ಘಟನೆಯೂ ನಡೆಯಿತು.

ಶಾಸಕರ ಆಗಮನ – ಕೋಳಿ ಅಂಕ ಸರಾಗ
ಧಾರ್ಮಿಕ ನಂಬಿಕೆಯ ಮೇಲೆ ನಡೆಯುವ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿರುವ ಘಟನೆ ಬಗ್ಗೆ ಮಾಹಿತಿ ಅರಿತ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ನೇರ ಕೋಳಿ ಅಂಕನಡೆಯುತ್ತಿದ್ದಲ್ಲಿಗೆ ಬಂದು ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದರು. ಯಾವುದೇ ಜೂಜು ಇಲ್ಲದೆ ಕೇವಲ ಧಾರ್ಮಿಕ ನಂಬಿಕೆಯ ಮೇಲೆ ನಡೆಯುವ ಕೋಳಿ ಅಂಕ ಯಾವುದೇ ಕಾರಣಕ್ಕು ನಿಲ್ಲಬಾರದು. ಕೋಳಿ ಅಂಕ ಮುಗಿಯುವವರೆಗೆ ನಾನು ಇಲ್ಲೇ ಕೂತಿರುತ್ತೇನೆ. 5 ಗಂಟೆಯವರೆಗೆ ಕೋಳಿ ಅಂಕ ನಡೆಯಲಿ ಎಂದು ಕೋಳಿ ಅಂಕ ನಡೆಯುವ ಗದ್ದೆಯಲ್ಲೆ ಕುಳಿತು ಕೋಳಿ ಅಂಕ ವೀಕ್ಷಿಸಿದರು.




