ನವದೆಹಲಿ: ಬಂಧನದಿಂದ ತಪ್ಪಿಸಿಕೊಳ್ಳಲು ಉಗ್ರನಿಗೆ ಸಹಾಯ ಮಾಡಿದ ಮತ್ತು ಉಗ್ರನ ವಿರುದ್ಧ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯನ್ನೇ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಉಪ ಪೊಲೀಸ್ ಆಯುಕ್ತರೊಬ್ಬರನ್ನು ಬಂಧಿಸಿದ್ದು, ಬಂಧಿತ ಅಧಿಕಾರಿಯನ್ನು ಶೇಖ್ ಆದಿಲ್ ಮುಸ್ತಾಕ್ ಎಂದು ಗುರುತಿಸಲಾಗಿದೆ.
ಅಧಿಕಾರಿಯನ್ನು ಶ್ರೀನಗರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಜುಲೈನಲ್ಲಿ ಬಂಧನಕ್ಕೆ ಒಳಗಾದ ಉಗ್ರನ ಮೊಬೈಲ್ ಫೋನ್ ಅನ್ನು ವಿಶ್ಲೇಷಿಸಿದಾಗ ಆತ ಆದಿಲ್ ಮುಸ್ತಾಕ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬುದು ತಿಳಿದುಬಂದಿದೆ. ಉಗ್ರ ಮತ್ತು ಉಪ ಅಧೀಕ್ಷಕರ ನಡುವೆ ಕನಿಷ್ಠ 40 ಕರೆಗಳಿದ್ದು, ಬಂಧನದಿಂದ ಹೇಗೆ ತಪ್ಪಿಸಿಕೊಳ್ಳುವುದು ಮತ್ತು ಕಾನೂನಿನ ನೆರವನ್ನು ಹೇಗೆ ಪಡೆಯುವುದು ಎಂದು ಮಾರ್ಗದರ್ಶನ ನೀಡುತ್ತಿದ್ದರು ಎಂದು ತನಿಖೆಯ ಮೇಲ್ವಿಚಾರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ತನಿಖಾ ಅಧಿಕಾರಿಯನ್ನು ಸಿಲುಕಿಸಲು ಉಗ್ರನ ಪರವಾಗಿ ಬಂಧಿತ ಅಧಿಕಾರಿಯು ಸುಳ್ಳು ದೂರನ್ನು ರಚಿಸಿದ್ದು, ಉಗ್ರನಿಂದ ಆದಿಲ್ ಮುಸ್ತಾಕ್ 5 ಲಕ್ಷ ರೂಪಾಯಿಗಳನ್ನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರ್ ಹಣಕಾಸು ನಿರ್ವಹಣೆಗಾಗಿ ಸೋಪೋರ್‌ನಲ್ಲಿ ನಕಲಿ ದಾಖಲೆಗಳ ಮೇಲೆ ಬ್ಯಾಂಕ್ ಖಾತೆ ತೆರೆದಿದ್ದ ಮುಝಾಮಿಲ್ ಜಹೂರ್‌ನೊಂದಿಗೆ ಅಧಿಕಾರಿಯು ನಿಕಟ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.