
ಉಡುಪಿ: ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ನದಿಗಳು ಮಾಲಿನ್ಯಗೊಳ್ಳುತ್ತಿವೆ. ಅಲ್ಲದೆ, ಪರಿಸರ ನಾಶವಾಗುತ್ತಿದ್ದು, ಸರ್ಕಾರಿ ಭೂಮಿಗಳ ಅತಿಕ್ರಮಣ ಕೂಡ ಆಗುತ್ತಿದೆ ಎಂದು ಆರೋಪಿಸಿ ಚೆನ್ನೈನಲ್ಲಿನ ಸರ್ವೋಚ್ಚ ನ್ಯಾಯಾಲಯದ ಹಸಿರು ಪೀಠಕ್ಕೆ ಪರಿಸರವಾದಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದೆ.
ಕೊಡಚಾದ್ರಿ ಬೆಟ್ಟಗಳಿಂದ ಹರಿದು ಬರುವ ಪುಣ್ಯ ತೀರ್ಥಗಳು ಸಂಗಮವಾಗಿ ಅಗ್ನಿ ತೀರ್ಥ, ಕಾಶಿ ತೀರ್ಥ ಹಾಗೂ ಸೌಪರ್ಣಿಕೆಯಾಗಿ ಕೊಲ್ಲೂರಿನಲ್ಲಿ ಹರಿಯುತ್ತಿದೆ. ಈ ಪುಣ್ಯ ಕ್ಷೇತ್ರಗಳಲ್ಲಿ ಸ್ನಾನ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ಪರಿಹಾರವಾಗುತ್ತದೆ. ಚರ್ಮ ಸಂಬಂಧಿತ ಕಾಯಿಲೆಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆಗಳು ಶ್ರೀ ಮೂಕಾಂಬಿಕಾ ದೇವಿಯ ಕೋಟ್ಯಾಂತರ ಭಕ್ತರ ಮನದಲ್ಲಿ ಇದೆ.
ದುರಂತವೆಂದರೆ ಇತ್ತೀಚಿನ ಕೆಲ ವರ್ಷಗಳಿಂದ ಕೊಲ್ಲೂರಿನಲ್ಲಿ ತಲೆ ಎತ್ತಿರುವ ಹಾಗೂ ನಿರ್ಮಾಣವಾಗುತ್ತಿರುವ ವಸತಿ ಗೃಹಗಳು, ಬಹು ಮಹಡಿಯ ಕಟ್ಟಡಗಳು ಹಾಗೂ ವಾಣಿಜ್ಯ ಕಟ್ಟಡಗಳಿಂದ ಅನುಪಯುಕ್ತ ದ್ರವ ಹಾಗೂ ಘನ ತ್ಯಾಜ್ಯಗಳು ನೇರವಾಗಿ ಪುಣ್ಯ ನದಿಯನ್ನು ಸೇರುತ್ತಿವೆ.
ಇದರಿಂದ ನದಿಯ ಪಾವಿತ್ರ್ಯತೆ ಹಾಳಾಗುವ ಜೊತೆಯಲ್ಲಿ ನೀರಿನಾಶ್ರಯ ಹೊಂದಿರುವ ಜಲಚರಗಳು ಹಾಗೂ ಪರಿಸರದ ಪ್ರಾಣಿ ಸಂಕುಲದ ಜೀವಕ್ಕೂ ಕುತ್ತು ತರುತ್ತಿದೆ. ಈ ಹಿನ್ನೆಲೆಯಲ್ಲಿ ಮೂಕಾಂಬಿಕಾ ದೇವಿಯ ಭಕ್ತರು ಹಾಗೂ ಪರಿಸರಾಸಕ್ತರು ಅನೇಕ ದಾಖಲೆಗಳನ್ನು ಪಡೆದುಕೊಂಡು, ನ್ಯಾಯಕ್ಕಾಗಿ ಹಸಿರು ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ಅರ್ಜಿಯ ವಿಚಾರಣೆಗೆ ಅಂಗೀಕಾರ ನೀಡಿದ್ದು, ಕ್ಷೇತ್ರದ ಮಾಲಿನ್ಯಕ್ಕೆ ಮುಕ್ತಿ ಸಿಗುವ ಭರವಸೆ ವ್ಯಕ್ತವಾಗಿದೆ.





