ಬಂಟ್ವಾಳ: ನೇತ್ರಾವತಿ ನದಿ ಬದಿಯಲ್ಲಿ ಕೃಷಿ ಉಪಯೋಗಕ್ಕೆ ಅಳವಡಿಸಿಲಾಗಿದ್ದ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲು ಬಂದಿದ್ದ ಅಧಿಕಾರಿಗಳಿಗೆ ಮಾ.30ರಂದು ಸರಪಾಡಿ ಎಂಬಲ್ಲಿ ಘೇರಾವ್ ಹಾಕಿರುವ ಬಗ್ಗೆ ವರದಿಯಾಗಿದೆ.
ಕೃಷಿಕರಿಗೆ ಯಾವುದೇ ಸೂಚನೆ ನೀಡದೆ, ಏಕಾಏಕಿ ವಿದ್ಯುತ್ ಸಂಪರ್ಕ ಕಡಿತ ಮಾಡಲು ಮುಂದಾಗಿದ್ದ ಮೆಸ್ಕಾಂ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಅಧಿಕಾರಿಗಳನ್ನು ವಾಪಾಸು ಕಳಿಸಿದರು.
ಸರಪಾಡಿ ಗ್ರಾಮದ ಪೆರ್ಲ ಬೀಯಪಾದೆ ಎಂಬಲ್ಲಿನ ಕೃಷಿಕರ ಪಂಪ್ ಸೆಟ್ಗಳ ಸಂಪರ್ಕ ಕಡಿತಕ್ಕೆ ಮೆಸ್ಕಾಂ ಇಲಾಖೆ ಮುಂದಾಗಿತ್ತು.
ನೇತ್ರಾವತಿ ನದಿಯಲ್ಲಿ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಮಂಗಳೂರು ಜನತೆಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ ಎಂಬ ಕಾರಣಕ್ಕಾಗಿ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಅಧಿಕಾರಿಗಳು ಕೃಷಿ ಪಂಪ್ ಸೆಟ್ ಗಳ ಸಂಪರ್ಕ ಕಡಿತಕ್ಕೆ ಮುಂದಾಗಿದ್ದರು.
ಈ ವೇಳೆ ಹಠಾತ್ ಸ್ಥಳಕ್ಕೆ ಜಮಾಯಿಸಿದ ಕೃಷಿಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ ಅಧಿಕಾರಿಗಳು ಸ್ಥಳದಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.