ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್

Share with

ಪ್ರಭಾಸ್ (Prabhas) ನಟನೆಯ ಸಿನಿಮಾ ಒಂದು ಬಿಡುಗಡೆ ಆಗಿ ಒಂದೂವರೆ ವರ್ಷವಾಯ್ತು. ಕಳೆದ ವರ್ಷ ಜುಲೈ ತಿಂಗಳಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಗಳಿಸಿತು. ಆದರೆ ಇತ್ತೀಚೆಗೆ ಪ್ರಭಾಸ್ ಸಿನಿಮಾಗಳ ಬಗ್ಗೆ ಯಾವುದೇ ಸುದ್ದಿ, ಸದ್ದು ಇಲ್ಲದಂತಾಗಿದೆ. ‘ಕಾಂತಾರ: ಚಾಪ್ಟರ್ 1’ ಜೊತೆಗೆ ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿ ಅಭಿಮಾನಿಗಳು ನಿರಾಶೆ ಹೊಂದಿದರು. ಆದರೆ ಪ್ರಭಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಟ್ಟೊಟ್ಟಿಗೆ ನಾಲ್ಕು ಸಿನಿಮಾಗಳ ಅಪ್ಡೇಟ್ ಸಿಗಲಿದೆ.

ಪ್ರಭಾಸ್ ಹುಟ್ಟುಹಬ್ಬ ಅಕ್ಟೋಬರ್ 23 ರಂದು ಇದ್ದು, ‘ದಿ ರಾಜಾ ಸಾಬ್’ ಸಿನಿಮಾದ ವಿಶೇಷ ಹಾಡೊಂದು ಅಂದು ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಆಗಲಿದೆ. ‘ದಿ ರಾಜಾ ಸಾಬ್’ ಅಸಲಿಗೆ ಕೆಲ ತಿಂಗಳ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ವಿಎಫ್ಎಕ್ಸ್ ಗುಣಮಟ್ಟ ಪ್ರಭಾಸ್ಗೆ ತೃಪ್ತಿ ತರಲಿಲ್ಲವಾದ್ದರಿಂದ ಸಿನಿಮಾದ ಹಲವು ಭಾಗಗಳನ್ನು ಮರು ಚಿತ್ರೀಕರಣ ಮಾಡಲಾಯ್ತು, ವಿಎಫ್ಎಕ್ಸ್ ಮೇಲೆ ಹೆಚ್ಚುವರಿ ಕೆಲಸ ಮಾಡಲಾಯ್ತು. ಇದೀಗ ಅಂತಿಮವಾಗಿ ಸಿನಿಮಾದ ಬಿಡುಗಡೆಯನ್ನು ಸಂಕ್ರಾಂತಿಗೆ ನಿಗದಿಪಡಿಸಲಾಗಿದೆ. ಅಲ್ಲಿಗೆ 2025ರಲ್ಲಿ ಪ್ರಭಾಸ್ನ ಒಂದೂ ಸಿನಿಮಾ ಬಿಡುಗಡೆ ಆಗುತ್ತಿಲ್ಲ.

ಪ್ರಭಾಸ್ ‘ಫೌಜಿ’ ಹೆಸರಿನ ಆಕ್ಷನ್-ರೊಮ್ಯಾಂಟಿಕ್ ಕತೆಯುಳ್ಳ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಸಣ್ಣ ಅಪ್ಡೇಟ್ ಸಹ ಈ ವರೆಗೆ ಹೊರಗೆ ಬಂದಿಲ್ಲ. ಬ್ಲಾಕ್ ಬಸ್ಟರ್ ಸಿನಿಮಾ ‘ಸೀತಾ-ರಾಮಂ’ ನಿರ್ದೇಶನ ಮಾಡಿರುವ ರಘು ಹನುಪುಡಿ ಅವರು ಈ ಸಿನಿಮಾ ನಿರ್ದೇಶಿಸಿದ್ದು, ಸಿನಿಮಾ ಅಪ್ಪಟ ಪ್ರೇಮಕತೆಯನ್ನು ಒಳಗೊಂಡಿದೆಯಂತೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಪ್ರಭಾಸ್ ಹುಟ್ಟುಹಬ್ಬದಂದು ಸಿನಿಮಾದ ಟೀಸರ್ ಒಂದು ಬಿಡುಗಡೆ ಆಗಲಿದೆ ಎನ್ನಲಾಗಿದೆ.

ಇನ್ನು ಪ್ರಭಾಸ್ ನಟನೆಯ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಸ್ಪಿರಿಟ್’ ಸಿನಿಮಾದ ಸಣ್ಣ ಅಪ್ಡೇಟ್ ಸಹ ಪ್ರಭಾಸ್ ಹುಟ್ಟುಹಬ್ಬದಂದು ಹೊರಬೀಳಲಿದೆ ಎನ್ನಲಾಗುತ್ತಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನ ಮಾಡಲಿರುವ ಈ ಸಿನಿಮಾದ ಚಿತ್ರೀಕರಣ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾದಲ್ಲಿ ಪ್ರಭಾಸ್ ಲುಕ್ನ ಪೋಸ್ಟರ್ ಅನ್ನು ಪ್ರಭಾಸ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಪ್ರಭಾಸ್ ಅನ್ನು ಪ್ಯಾನ್ ಇಂಡಿಯಾ ಸ್ಟಾರ್ ಅನ್ನಾಗಿಸಿದ ಸಿನಿಮಾ ‘ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳು ಇದೇ ತಿಂಗಳು ಅಕ್ಟೋಬರ್ 31ರಂದು ಮರು ಬಿಡುಗಡೆ ಆಗುತ್ತಿವೆ. ಎರಡೂ ಸಿನಿಮಾಗಳನ್ನು ಒಟ್ಟು ಸೇರಿಸಿ ‘ಬಾಹುಬಲಿ: ದಿ ಎಪಿಕ್’ ಎಂಬ ಹೆಸರಲ್ಲಿ ಮರು ಬಿಡುಗಡೆ ಮಾಡಲಾಗುತ್ತಿದ್ದು, ಪ್ರಭಾಸ್ ಹುಟ್ಟುಹಬ್ಬದಂದು ‘ಬಾಹುಬಲಿ: ದಿ ಎಪಿಕ್’ ತಂಡದಿಂದಲೂ ವಿಶೇಷ ಟ್ರೈಲರ್ ಬಿಡುಗಡೆ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಪ್ರಭಾಸ್ ಅವರ ಈ ವರ್ಷದ ಹುಟ್ಟುಹಬ್ಬ ಅಭಿಮಾನಿಗಳಿಗೆ ಹಬ್ಬವೇ ಆಗಲಿದೆ.


Share with

Leave a Reply

Your email address will not be published. Required fields are marked *