ಬೆಂಗಳೂರು: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಎಸ್ಕೇಪ್ ಆಗಿದ್ದು ಮೇ.30ರಂದು ಮಧ್ಯರಾತ್ರಿ ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್‌ಗೆ ಬಂದು ಇಳಿದಿದ್ದಾರೆ. ಪ್ರಜ್ವಲ್ ರೇವಣ್ಣ ಇಳಿಯುತ್ತಿದ್ದಂತೆ ಎಸ್‌ಐಟಿ ಆಧಿಕಾರಿಗಳು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳದಲ್ಲಿದ್ದ ಭದ್ರತಾ ಸಿಬಂದಿ ಹಾಗೂ ವಲಸೆ ಅಧಿಕಾರಿಗಳು ವಿಶೇಷ ಕೊಠಡಿಗೆ ಕರೆ ತಂದು ಪರಿಶೀಲನೆ ನಡೆಸಿದ್ದಾರೆ. ಅವರ ಬೆರಳಚ್ಚು ಹಾಗೂ ಫೊಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಹಿರಿಯ ಎಸ್‌ಐಟಿ ಅಧಿಕಾರಿ ಪ್ರಜ್ವಲ್‌ನನ್ನು ವಿಮಾನ ನಿಲ್ದಾಣದಿಂದ ಎಸ್‌ಐಟಿ ಕಛೇರಿಗೆ ವಿಮಾನ ನಿಲ್ದಾಣದ ಹಿಂದಿನ ಗೇಟ್ ಮೂಲಕ ಪ್ರಜ್ವಲ್‌ನನ್ನು ಹೊರಗೆ ಕರೆದೊಯ್ದಿದ್ದಾರೆ. ವಿಮಾನ ನಿಲ್ದಾಣ, ಬಳ್ಳಾರಿ ರಸ್ತೆಯುದ್ದಕ್ಕೂ ಹಾಗೂ ಎಸ್‌ಐಟಿ ಕಛೇರಿ ಸುತ್ತಮುತ್ತ ಪೊಲೀಸ್ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಪ್ರಜ್ವಲ್ ರೇವಣ್ಣನನ್ನು ಮಹಿಳಾ ಅಧಿಕಾರಿಗಳು SIT ಕಚೇರಿಗೆ ಜೀಪ್ನಲ್ಲಿ ಕರೆತಂದಿದ್ದಾರೆ. ಪ್ರಜ್ವಲ್ ರೇವಣ್ಣ ಇದ್ದ ಜೀಪ್ನಲ್ಲಿ ಚಾಲಕ ಹೊರತು ಪಡಿಸಿದರೆ ಉಳಿದ ಐವರು ಮಹಿಳಾ ಅಧಿಕಾರಿಗಳೆ ಇದ್ದರು. ಇನ್ನು ಅತ್ಯಾಚಾರ ಆರೋಪವನ್ನು ಹೊತ್ತಿರುವ ಪ್ರಜ್ವಲ್ ನನ್ನು ಮಹಿಳಾ ಅಧಿಕಾರಿಗಳೊಂದಿಗೆ ಎಸ್‌ಐಟಿ ಕಚೇರಿಗೆ ಕರೆತಂದಿದ್ದು, ದೊಡ್ಡ ಪ್ರಶ್ನೆಗೆ ಕಾರಣವಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಹೀಗಾಗಿ ದೌರ್ಜನ್ಯಕ್ಕೆ ಒಳಗಾದವರು ಹೆದರದೆ ಬಂದು ದೂರು ಕೊಡಿ ಎಂದು ಸಂದೇಶ ರವಾನಿಸಲು ಮಹಿಳಾ ಸಿಬ್ಬಂದಿ ಎಸ್ಐಟಿ ಕಚೇರಿಗೆ ಕರೆತಂದ್ರಾ ಎಂಬ ಪ್ರಶ್ನೆ ಮೂಡಿದೆ.
ಇನ್ನು ಎಸ್‌ಐಟಿ ತನಿಖೆ ಪ್ರಜ್ವಲ್ ಸಹಕಾರ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ. ನನ್ನ ಮೇಲೆ ಮಾಡಿರುವ ಆರೋಪಗಳೆಲ್ಲ ಸುಳ್ಳು. ಯಾವ ಪ್ರಕರಣಗಳಿಗೂ ನನಗೂ ಸಂಬಂಧವಿಲ್ಲ. ನಾನೇನು ಮಾಡಿಲ್ಲ.. ನಂಗೇನು ಗೊತ್ತಿಲ್ಲ ಎಂದು ತನಿಖೆ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಪ್ರಜ್ವಲ್ ಮೊಬೈಲ್ ವಶಪಡಿಸಿಕೊಂಡಿದ್ದು ಮೊಬೈಲ್‌ನಲ್ಲಿ ಡೇಟಾ ರಿಟ್ರೀವ್ ಮಾಡಲು ಎಫ್ಎಸ್ಎಲ್ ಗೆ ಕಳುಹಿಸಿಕೊಡಲಾಗಿದೆ.