ಬೆಂಗಳೂರು: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟೀಯ ಶಿಕ್ಷಣ ನೀತಿ ರದ್ದು ಪಡಿಸಿ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರ್ಕಾರ, ಇದೀಗ ಭರದ ಸಿದ್ಧತೆ ನಡೆಸುತ್ತಿದೆ.
ಎನ್ಇಪಿ ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಎಸ್ಇಪಿ ಜಾರಿ ಬಗ್ಗೆ ಈಗಾಗಲೇ ಹಲವು ಹಂತದ ಸಭೆಗಳನ್ನು ಉನ್ನತ ಶಿಕ್ಷಣ ಸಚಿವರೊಂದಿಗೆ ನಡೆಸಲಾಗಿದೆ. ಅದಕ್ಕಾಗಿ ಹಂತ ಹಂತವಾಗಿ ಎನ್ಇಪಿ ವಾಪಸ್ ಪಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷದಿಂದಲೇ ಎನ್ಇಪಿ ರದ್ದು ಮಾಡಿ ಎಸ್ಇಪಿ ಜಾರಿಗೆ ಸರ್ಕಾರದ ಚಿಂತನೆ ನಡೆಸಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಎನ್ಇಪಿ ಅಡಿ ವಿದ್ಯಾರ್ಥಿಗಳನ್ನ ದಾಖಲಾತಿ ಮಾಡಿಕೊಳ್ಳುವುದನ್ನು ಕೈಬಿಡಲಾಗುತ್ತದೆ. ಈಗಾಗಲೇ ಅದರ ಅಡಿ ದಾಖಲಾದ ವಿದ್ಯಾರ್ಥಿಗಳ ಕೋರ್ಸ್ ಮುಕ್ತಾಯಕ್ಕೆ ಕ್ರಮವಹಿಸಲಾಗುತ್ತದೆ. ಎಸ್ಇಪಿ ಜಾರಿಗೆ ನೀತಿ ನಿಯಮಗಳು, ಪಠ್ಯಕ್ರಮ ಸೇರಿದಂತೆ ಶಿಕ್ಷಣ ನೀತಿ ರಚನೆಗೆ ತಜ್ಞರ ಸಮಿತಿ ರಚನೆಗೆ ತಯಾರಿ ಮಾಡಿಕೊಳ್ಳಲಾಗಿದೆ. ಶೀಘ್ರವೇ ತಜ್ಞರ ಸಮಿತಿ ರಚನೆ ಮಾಡಿ ರಾಜ್ಯ ಶಿಕ್ಷಣ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ.
ಬಹುತೇಕ ರಾಜ್ಯ ಸರ್ಕಾರದ ಅಧೀನದ ವಿವಿಗಳ ಅಭಿಪ್ರಾಯ ಪಡೆದಿರುವ ಸರ್ಕಾರ, ತಜ್ಞರ ಸಮಿತಿಯ ವರದಿ ಪಡೆದ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ಕ್ರಮವಹಿಸಲಿದೆ. ಎನ್ಇಪಿಯ ಕೆಲವು ಅಂಶಗಳೊಂದಿಗೆ ತಜ್ಞರ ಸಮಿತಿಯಿಂದ ಸರ್ಕಾರವೇ ವಿಶೇಷ ಶಿಕ್ಷಣ ನೀತಿ ರೂಪಿಸಲಿದೆ. ಈ ಯೋಜನೆ ಫಲಿಸಿದರೆ 2024-25ನೇ ಸಾಲಿನಿಂದಲೇ ರಾಜ್ಯ ಶಿಕ್ಷಣ ನೀತಿ ಜಾರಿಯಾಗುವ ಸಾಧ್ಯತೆ ಇದೆ.