ನಾಸಿಕ್: ನಾಸಿಕ್‌ನ ಶ್ರೀ ಕಾಲಾರಾಮ್ ಮಂದಿರದಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಮಂದಿರದಲ್ಲಿಯೇ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಜನವರಿ 22ರಂದು ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಸ್ಥಳಗಳನ್ನು ಸ್ವಚ್ಛವಾಗಿಡಲು ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ಮೋದಿ ಆಗ್ರಹಿಸಿದ್ದಾರೆ.
ಶ್ರೀ ಕಾಲಾರಾಮ್ ಮಂದಿರದಲ್ಲಿ ಸ್ವತಃ ಪ್ರಧಾನಿ ಮೋದಿ ಅವರೇ ಪ್ರಾಂಗಣವನ್ನು ಸ್ವಚ್ಛಗೊಳಿಸಿದರು. ನೆಲ ಸಾರಿಸುವ ಕೋಲು ಮತ್ತು ಬಕೆಟ್‌ನಲ್ಲಿ ನೀರು ತಂದು ದೇವಸ್ಥಾನದ ಪ್ರಾಂಗಣವನ್ನು ಶುಚಿಗೊಳಿಸಿದರು. ಈ ಮೂಲಕ ಎಲ್ಲ ಧಾರ್ಮಿಕ ಜಾಗಗಳನ್ನು ಶುಚಿಯಾಗಿಡಲು ಪ್ರೇರಣೆ ನೀಡಿದ್ದಾರೆ.
ಕಲಾರಾಮ ಮಂದಿರದಲ್ಲಿ ದರ್ಶನ ಹಾಗೂ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ ಅವರು ಗೋದಾವರಿ ನದಿಯ ದಡದಲ್ಲಿರುವ ಶ್ರೀ ರಾಮ್ ಕುಂಡದಲ್ಲಿಯೂ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಮೋದಿ ಅವರು ಸಂತ ಏಕನಾಥ್ ಮರಾಠಿಯಲ್ಲಿ ಬರೆದ ‘ಭಾವಾರ್ಥ ರಾಮಾಯಣ’ ಶ್ಲೋಕಗಳನ್ನು ಕೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಅವರು ಇಂದು ನಾಸಿಕ್ ನಲ್ಲಿ ಸ್ವಾಮಿ ವಿವೇಕಾನಂದ ಅವರ ಜನ್ಮ ಜಯಂತಿಯ ಪ್ರಯುಕ್ತ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ನಮಿಸಿದರು.