ಮಂಜೇಶ್ವರ: ಮಂಜೇಶ್ವರ ರಾಗಂ ಜಂಕ್ಷನಿನಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯ ಜನತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆಸುತ್ತಿರುವ ಅನರ‍್ಧಿಷ್ಟಾವಧಿ ಮುಷ್ಕರಕ್ಕೆ ಅಧಿಕೃತರ ಭಾಗದಿಂದ ಈ ತನಕ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಮುಷ್ಕರದ 33ನೇ ದಿನದಂದು ಅಧಿಕೃತರು ಈ ಬಗ್ಗೆ ತಿರುಗಿಯೂ ನೋಡದ ಹಿನ್ನೆಲೆಯಲ್ಲಿ ನಾಡಿನ ಜನತೆ ಹೋರಾಟ ಸಮಿತಿಯ ನೇತೃತ್ವದಲ್ಲಿ ರಾಗಂ ಜಂಕ್ಷನ್ ನಿಂದ ಕರೋಡ ಅಂಡರ್ ಪಾಸ್ ತನಕ ಪಂಜಿನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಜಾತಿ ಮತ ಭೇದವನ್ನು ಮರೆತು ನಡೆಯುತ್ತಿರುವ ಈ ಅನರ‍್ಧಿಷ್ಟಾವಧಿ ಮುಷ್ಕರಕ್ಕೆ ವಿವಿಧ ಪಕ್ಷಗಳ ನೇತಾರರು ಆಗಮಿಸಿ ಬೆಂಬಲವನ್ನು ಸೂಚಿಸಿ ಭರವಸೆಗಳನ್ನು ನೀಡಿ ತೆರಳಿದ್ದಾರೆ ಹೊರತು ಈ ತನಕ ಇಲ್ಲಿಯ ಜನತೆಗೆ ಯಾವುದೇ ಸಿಹಿ ಸುದ್ದಿ ಲಭ್ಯವಾಗಿಲ್ಲ.
ಈ ಪ್ರದೇಶದ ಜನತೆ ಆಸ್ಪತ್ರೆ, ರಿಜಿಸ್ಟ್ರಾರ್ ಕಚೇರಿ, ಬ್ಯಾಂಕ್, ರೇಶನ್ ಅಂಗಡಿ, ಮೀನು ಮಾರ್ಕೆಟ್, ಶಾಲಾ ಕಾಲೇಜು ಸೇರಿದಂತೆ ವಿವಿಧ ಅತ್ಯವಶ್ಯಕ್ಕಾಗಿ ಇಲ್ಲಿಯ ರಸ್ತೆಯನ್ನು ದಾಟಿಯೇ ಸಾಗಬೇಕಾಗಿದೆ. ಪಂಜಿನ ಮೆರವಣಿಗೆಗೆ ಹೋರಾಟ ಸಮಿತಿಯ ಜಬ್ಬಾರ್ ಬಹ್ರೈನ್, ಎಸ್ ಎಂ ಬಶೀರ್, ಝಕರಿಯ್ಯ, ಅಬೂಬಕ್ಕರ್ ಸಿದ್ದೀಕ್, ನಯನಾರ್ ಮೊದಲಾದವರು ನೇತೃತ್ವ ನೀಡಿದರು.