
ಶತ್ರುವಂತೆ ಕಾಡುವ ಕ್ಯಾನ್ಸರ್ ಹೆಸರು ಕೇಳಿದರೆ ಸಾಕು, ಈ ಮಾರಾಣಾಂತಿಕ ಕಾಯಿಲೆ ಯಾರಿಗೂ ಬರದಿರಲಿ ಎಂದು ಬೇಡುವವರೇ ಹೆಚ್ಚು. ನೀವು ಈ ಪ್ರಾಸ್ಟೇಟ್ ಕ್ಯಾನ್ಸರ್ (Prostate Cancer) ಹೆಸರನ್ನು ಕೇಳಿರಬಹುದು. ಹೌದು, ಪುರುಷರಲ್ಲಿ ಮಾರಣಾಂತಿಕ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಿದೆ. 50 ವರ್ಷ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಇದೀಗ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ (Joe Biden) ಅವರು ಪ್ರಾಸ್ಟೇಟ್ ಕ್ಯಾನ್ಸರ್ ಗೆ ತುತ್ತಾಗಿದ್ದಾರೆ. ಪುರುಷರಲ್ಲಿ ಮೂತ್ರಕೋಶದ ಕೆಳಗೆ ಇರುವ ಪ್ರಾಸ್ಟೇಟ್ ಗ್ರಂಥಿಯಲ್ಲಿ ಕಂಡುಬರುವ ಮಾರಣಾಂತಿಕ ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು.
ಏನಿದು ಪ್ರಾಸ್ಟೇಟ್ ಕ್ಯಾನ್ಸರ್?
ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚಾಗಿ ಪುರುಷರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ. ಪ್ರಾಸ್ಟೇಟ್ ಪುರುಷರ ಜನನೇಂದ್ರಿಯದ ಒಂದು ಗ್ರಂಥಿಯಾಗಿದ್ದು, ಮೂತ್ರಕೋಶದ ಕೆಳಗೆ ಇರುವ ಪ್ರಾಸ್ಟೇಟ್ ಗ್ರಂಥಿಯಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಈ ಗ್ರಂಥಿಯಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯೂ ಪ್ರಾಸ್ಟೇಟ್ ಕ್ಯಾನ್ಸರ್ ಆಗಿ ಮಾರ್ಪಡಾಗುತ್ತದೆ. ಪ್ರಾರಂಭದಲ್ಲೇ ಇದರ ರೋಗಲಕ್ಷಣಗಳನ್ನು ಗುರುತಿಸುವುದು ಕಷ್ಟಕರವಾಗಿದ್ದು, ಸರಿಯಾದ ಚಿಕಿತ್ಸೆ ನೀಡಿದರೆ ಈ ಕಾಯಿಲೆಯಿಂದ ಗುಣಮುಖವಾಗಬಹುದು.
ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು
* ಮೂತ್ರ ವಿಸರ್ಜನೆಯ ವೇಳೆ ಅಸ್ವಸ್ಥತೆ
* ಮೂತ್ರವಿಸರ್ಜನೆಯಾದ ಬಳಿಕ ಮೂತ್ರಕೋಶ ಖಾಲಿಯಾಗಿಲ್ಲ ಎನ್ನುವ ಭಾವನೆ
* ರಾತ್ರಿಯ ವೇಳೆ ಪದೇ ಪದೇ ಎಚ್ಚರವಾಗುವುದು
* ಮೂತ್ರದಲ್ಲಿ ರಕ್ತಸ್ರಾವ
* ಸೊಂಟ ಅಥವಾ ಜನನಾಂಗಗಳಲ್ಲಿ ತೀವ್ರ ನೋವು
* ವೀರ್ಯದಲ್ಲಿ ರಕ್ತ
* ಶಿಶ್ನದ ನಿಮಿರುವಿಕೆ
* ಬೆನ್ನುಹುರಿಯಲ್ಲಿ ವಿಪರೀತ ನೋವು
* ಆಯಾಸ, ದುರ್ಬಲ ಭಾವನೆ
* ತೂಕ ನಷ್ಟ
ಪ್ರಾಸ್ಟೇಟ್ ಕ್ಯಾನ್ಸರ್ ಗೆ ಚಿಕಿತ್ಸೆ ಹೇಗೆ?
ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡ ಪ್ರಾರಂಭದಲ್ಲಿ ಸರಿಯಾದ ಚಿಕಿತ್ಸೆ ಪಡೆದರೆ ಈ ಕಾಯಿಲೆಯನ್ನು ಗುಣಪಡಿಸಬಹುದು. ಪಿಎಸ್ಎ ರಕ್ತ ಪರೀಕ್ಷೆ, ಡಿಜಿಟಲ್ ಗುದನಾಳ ಪರೀಕ್ಷೆ ಸೇರಿದಂತೆ ಇನ್ನಿತರ ಪರೀಕ್ಷೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಇದೆಯೇ ಎಂದು ಪತ್ತೆ ಹಚ್ಚಬಹುದು. ಈ ಕ್ಯಾನ್ಸರ್ ಕಾಣಿಸಿಕೊಂಡ ವ್ಯಕ್ತಿಗೆ ರೇಡಿಯೋಥೆರಪಿ, ಶಸ್ತ್ರಚಿಕಿತ್ಸೆ, ಆಂಡ್ರೊಜೆನ್ ನಿವಾರಣಾ ಚಿಕಿತ್ಸೆ ಸೇರಿದಂತೆ ಇನ್ನಿತ್ತರ ಚಿಕಿತ್ಸಾ ವಿಧಾನಗಳನ್ನು ವೈದ್ಯರು ಅನುಸರಿಸುತ್ತಾರೆ.
ಪ್ರಾಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಯುವುದು ಹೇಗೆ?
* ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
* ದೇಹದ ರಕ್ತದಲ್ಲಿ ಅಸಮತೋಲನ ಉಂಟುಮಾಡುವ ಆಹಾರಗಳನ್ನು ಹಾಗೂ ಕೆಫೀನ್ ಯುಕ್ತ ಆಹಾರಗಳನ್ನು ಆದಷ್ಟು ಸೇವಿಸದೆ ಇರುವುದು.
* ನಿಯಮಿತ ವ್ಯಾಯಾಮ ಹಾಗೂ ಬಾದಾಮಿ, ಅಕ್ರೋಟ್, ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ.
* ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳುವುದು.
* ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವತ್ತ ಗಮನ ಕೊಡುವುದು.
* ಅತಿಯಾದ ಆಲ್ಕೋಹಾಲ್ ಸೇವನೆಯನ್ನು ತಪ್ಪಿಸುವುದು ಪ್ರಯೋಜನಕಾರಿ.