ಪುಣಚ ಗ್ರಾಮ ಸಭೆ: ಗ್ರಾಮದ ಹಲವಾರು ಬೇಡಿಕೆ ಈಡೇರಿಕೆಗೆ ಆಗ್ರಹ

Share with

ವಿಟ್ಲ: ಪುಣಚ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಗ್ರಾಮ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಆಗಮಿಸದೇ, ಸಕಾರಣ ನೀಡುವುದೇ ರೂಢಿಯಾಗಿದೆ. ಗ್ರಾಮ ಸಭೆಯ ನಿರ್ಣಯ ಅಂತಿಮ ಎಂದು ಹೇಳಲಾಗುತ್ತಿದೆಯಾದರೂ ತಾಲೂಕು ಮಟ್ಟದ ಅಧಿಕಾರಿ ವರ್ಗ ಸಭೆಗೆ ಸರಿಯಾಗಿ ಬರುತ್ತಿಲ್ಲ. ಕಾರ್ಯಕ್ರಮದ ಒತ್ತಡ ಇಲ್ಲದಂದು ಗ್ರಾಮ ಸಭೆ ಇಡುವುದು ಉತ್ತಮ. ಆಗಾದರೂ ಸಭೆಗೆ ಹಾಜರಾಗುತ್ತಾ ಎಂಬುದನ್ನು ನೋಡುವುದು ಉತ್ತಮ ಎಂಬ ಅಭಿಪ್ರಾಯ ಸಭೆಯಿಂದ ವ್ಯಕ್ತವಾಯಿತು.

ಬಿದ್ದ ಕಂಬ ದುರಸ್ಥಿಗೆ ಲೈನ್ ಮ್ಯಾನ್ ಗಳು ಹೋಗುವುದಾ ಶಾಖಾಧಿಕಾರಿಗಳಾ ಎಂಬುದನ್ನು ಸ್ಪಷ್ಟ ಪಡಿಸಬೇಕು.. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ನಿರ್ಣಯ ಮಾಡಬೇಕು. ಈ ಮೂಲಕ ತಜ್ಞ ವೈದ್ಯರನ್ನು ಕರೆಸಿಕೊಳ್ಳುವ ಕೆಲಸ ನಡೆಯಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮದಲ್ಲಿ ನಿರ್ಗತಿಕರು ಸಮಸ್ಯೆಗೊಳಗಾಗಿ ಬಸ್ ನಿಲ್ದಾಣಗಳಲ್ಲಿ ದಿನಗಟ್ಟಲೆ ಇದ್ದರೂ, ಕ್ರಮಕೈಗೊಳ್ಳುತ್ತಿಲ್ಲ. ಭಿಕ್ಷುಕರನ್ನು ಆಸ್ಪತ್ರೆಗೆ ಸಾರ್ವಜನಿಕರೇ ಸೇರ್ಪಡೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಗ್ರಾಮಸ್ಥರಿಂದ ಸಂಗ್ರಹ ಮಾಡುವ ಭಿಕ್ಷುಕರ ಕರ ಪಂಚಾಯಿತಿ ಸ್ಥಗಿತ ಮಾಡಬೇಕು. ಕಂದಾಯ ಅಧಿನಿಯಮ ಪ್ರಕಾರ ಒಟ್ಟು ಜಮೀನಿನ ಶೇ.೧೦ರಷ್ಟು ಭೂಮಿಯಲ್ಲಿ ಮನೆ ಕಟ್ಟುವುದಕ್ಕೆ ಅವಕಾಶವಿದೆ. ಆದರೆ ಅಧಿಕಾರಿ ವರ್ಗ ೯/೧೧ರಲ್ಲಿ ಹೆಸರಿನಲ್ಲಿ ಜನರನ್ನು ಅಲೆದಾಡಿಸುವ ಕೆಲಸ ಸರಿಯಲ್ಲ. ಭೂ ಪರಿವರ್ತನೆಯಿಲ್ಲದೆ ಅಗತ್ಯ ವ್ಯವಸ್ಥೆಯನ್ನು ಮಾಡಲು ಅವಕಾಶ ನೀಡಬೇಕು ಎಂಬ ಆಗ್ರಹ ಕೇಳಿ ಬಂತು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ ರೈತರ ಆಧಾರ್ ಜತೆಗೆ ಜಮೀನುಗಳನ್ನು ಜೋಡಿಸುವ ಕೆಲಸ ನಡೆಯುತ್ತಿದೆ. ಆದರೆ ರೈತರ ಸ್ವಾಧೀನ ಇರುವ ಸರ್ಕಾರಿ ಜಮೀನು ಹಾಗೂ ಕುಮ್ಕಿಯನ್ನು ಜೋಡಿಸದೆ ಸರ್ಕಾರಿ ಎಂದು ತೋರಿಸಿ, ರೈತರಿಗೆ ಸಮಸ್ಯೆ ಮಾಡುವ ಕಾರ್ಯವಾಗಬಾರದು. ರಾಜ್ಯದ ಕೆಲವು ಭಾಗದಲ್ಲಿ ರೈತರ ಜಮೀನುಗಳನ್ನು ಅರಣ್ಯ ಎಂದು ಪರಿವರ್ತಿಸುವ ಕೆಲಸವಾಗಿದ್ದು, ಈ ರೀತಿಯಲ್ಲಿ ಇಲ್ಲೂ ನಡೆಯದಂತೆ ಎಚ್ಚರ ವಹಿಸುವುದು ಉತ್ತಮ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ವೆಂಕಟ್ರಮಣ ಮಾತನಾಡಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಾರದೆ ಹಲವು ವರ್ಷಗಳಾಗಿದೆ. ಈ ಬಗ್ಗೆ ಅಗತ್ಯ ಕ್ರಮವನ್ನು ಇಲಾಖೆ ಕೈಗೊಳ್ಳಬೇಕಾಗಿದೆ. ಸಾರ್ವಜನಿಕ ಶೌಚಾಲಯಗಳ ಸಮರ್ಪಕ ನಿರ್ವಹಣೆ ಕಾರ್ಯ ನಡೆಯುತ್ತಿಲ್ಲ, ಅದನ್ನು ಮಾಡಿಸುವ ಕೆಲಸವಾಗಬೇಕು. ತೋರಣಕಟ್ಟೆ ನೆಲ್ಲಿಗುಡ್ಡೆ ಆಜೇರು ರಸ್ತೆಯ ಸರಿಪಡಿಸುವ ಬಗ್ಗೆ ವಿವಿಧ ಅಧಿಕಾರಿಗಳಿಗೆ ದೂರು ನೀಡಿದರೂ ಸರಿಪಡಿಸುವ ಕಾರ್ಯದಲ್ಲಿ ವಿಳಂಬ ಮಾಡಲಾಗುತ್ತಿದೆ. ತಕ್ಷಣ ವ್ಯವಸ್ಥೆ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳು ಹೇಳಿಕೊಂಡರೂ ಪಂಚಾಯಿತಿಯಲ್ಲಿ ಸುತ್ತೋಲೆಗೆ ಬೆಲೆ ಇಲ್ಲ ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಮಾತನಾಡಿ ಕಾಲು ಸಂಕ ಅಥವಾ ಕಾಲು ದಾರಿಯ ದುರಸ್ಥಿಗೆ ೫೦ ಸಾವಿರ ಖರ್ಚು ಮಾಡಿದ ತಕ್ಷಣ ಆ ದಾರಿ ಪಂಚಾಯಿತಿಯದ್ದೆಂದು ಆಗುವುದಿಲ್ಲ. ಜನರ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿಕೊಡುವ ಕೆಲಸ ನಡೆಯುತ್ತದೆ ಎಂದು ತಿಳಿಸಿದರು.

ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ವಿನಯ ಕುಮಾರಿ ಭಾಗವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧ ಯಾನೆ ಬೇಬಿ ವಹಿಸಿದ್ದರು. ಪಂಚಾಯಿತಿ ಸಿಬ್ಬಂದಿ ಪಾರ್ವತಿ ವರದಿ ವಾಚಿಸಿದರು. ಆರೋಗ್ಯ, ಕಂದಾಯ, ಸಮಾಜ ಕಲ್ಯಾಣ, ಶಿಕ್ಷಣ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು , ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *