ಪುತ್ತೂರು: ಹಿಂದುತ್ವದ ಹೆಸರಿನಲ್ಲಿ ವೋಟು ಕೇಳಿ ಅದೇ ಆಧಾರದಲ್ಲಿ ಅಧಿಕಾರಕ್ಕೆ ಬಂದವರು ಇದುವರೆಗೆ ಒಂದೇ ಒಂದು ದೈವ, ದೇವಸ್ಥಾನದ ದಾಖಲೆಗಳನ್ನು ಸರಿಮಾಡಲಿಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಆರೋಪಿಸಿದರು.
ಅವರು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಮತ್ತು ಅಲ್ಲಿ ಆಗಬೇಕಾದ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಜೀರ್ಣೋದ್ದಾರ ಕೆಲಸವನ್ನು ವೀಕ್ಷಣೆ ಮಾಡಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಬಹುತೇಕ ದೈವ, ದೇವಸ್ಥಾನದ ಜಾಗದ ದಾಖಲೆಗಳು ಸರಿಯಿಲ್ಲ. ಯಾವುದೇ ದೇವಸ್ಥಾನಕ್ಕಾಗಲಿ, ದೈವಸ್ಥಾನಕ್ಕಗಿ ಅದರದೇ ಹೆಸರಿನಲ್ಲಿ ಆರ್ ಟಿ ಸಿ ಇಲ್ಲ ಇತರೆ ಯಾವುದೇ ದಾಖಲೆಗಳು ಇಲ್ಲ. ದಾಖಲೆಗಳಿಲ್ಲ ಕಾರಣಕ್ಕೆ ಅನುದಾನವನ್ನು ಪಡೆಯಲು ಕಷ್ಟವಾಗುತ್ತಿದೆ. ಯಾವುದೇ ದೇವಸ್ಥಾನ ಅಥವಾ ದೈವಸ್ಥಾನಕ್ಕೆಸರಕಾರದಿಂದ ಅನುದಾನ ನೀಡಬೇಕಾದರೆ ದಾಖಲೆಗಳು ಅತೀ ಅಗತ್ಯವಾಗಿದೆ, ದಾಖಲೆ ಇಲ್ಲದೆ ಹೇಗೆ ಅನುದಾನವನ್ನು ನೀಡುವುದು ಎಂಬುದೇ ಅತ್ಯಂತ ಬೇಸರದ ಸಂಗತಿಯಾಗಿದೆ. ಹಿಂದುತ್ವದ ಹೆಸರಿನಲ್ಲೇ ವೋಟು ಕೇಳಿದವರು ದೇವಸ್ಥಾನದ ದಾಖಲೆ ಪತ್ರಗಳನ್ನಾದರೂ ಸರಿ ಮಾಡಬಹುದಿತ್ತು ಎಂದು ಹೇಳಿದ ಶಾಸಕರು ಪ್ರತೀ ಚುನಾವಣೆಯ ಸಂದರ್ಭದಲ್ಲಿ ಮುಗ್ದ ಜನರನ್ನು ಧರ್ಮದ ಹೆಸರಿನಲ್ಲಿ ಕೆರಳಿಸಿ ಅಧಿಕಾರಕ್ಕೇರಿದ್ದು ಮಾತ್ರ ಅವರ ಸಾಧನೆಯಾಗಿದೆ ಎಂದು ಹೇಳಿದರು.