ಶಿವಪುರಿ (ಮಧ್ಯಪ್ರದೇಶ): ಮನೆಯಲ್ಲಿ ಸಣ್ಣ ವಿಷಯಕ್ಕೆ ಶುರುವಾದ ಜಗಳವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಕೇವಲ ತುಪ್ಪದ ವಿಚಾರವಾಗಿ ಅತ್ತೆಯೊಂದಿಗೆ ಉಂಟಾದ ಭಿನ್ನಾಭಿಪ್ರಾಯದಿಂದ ಮನನೊಂದ 26 ವರ್ಷದ ಗೃಹಿಣಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಪುರಿ ಜಿಲ್ಲೆಯ ಇಚೌಡಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ: ಮೃತ ಮಹಿಳೆಯನ್ನು ಸೋನಂ ಜಾತವ್ ಎಂದು ಗುರುತಿಸಲಾಗಿದೆ. 2018ರಲ್ಲಿ ಧನಪಾಲ್ ಎಂಬುವವರನ್ನು ವಿವಾಹವಾಗಿದ್ದ ಸೋನಂ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಜಂಟಿ ಕುಟುಂಬದಲ್ಲಿದ್ದ ಇವರು, ಸಣ್ಣಪುಟ್ಟ ಕೌಟುಂಬಿಕ ಕಲಹಗಳಿಂದಾಗಿ ಇತ್ತೀಚೆಗೆ ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದರು.
ಜಗಳಕ್ಕೆ ಕಾರಣವಾದ ತುಪ್ಪ: ಧನಪಾಲ್ ಅವರ ತಾಯಿ (ಅತ್ತೆ) ಸೊಸೆ ಸೋನಂ ಬಳಿ ಸ್ವಲ್ಪ ತುಪ್ಪ ಕೇಳಿದ್ದಾರೆ. ಮೊದಲು ನೀಡಲು ನಿರಾಕರಿಸಿದ ಸೋನಂ, ನಂತರ ಪತಿಯ ಒತ್ತಾಯಕ್ಕೆ ಮಣಿದು ತುಪ್ಪ ನೀಡಿದ್ದಾರೆ. ಆದರೆ, ಇದಾದ ಬಳಿಕ ಧನಪಾಲ್ ತನ್ನ ತಾಯಿಗಾಗಿ ಮತ್ತಷ್ಟು ತುಪ್ಪ ತಂದುಕೊಟ್ಟಿದ್ದಾರೆ. ಇದು ಸೋನಂ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಅತ್ತೆ-ಸೊಸೆಯ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ.ಜಗಳದಿಂದ ತೀವ್ರವಾಗಿ ನೊಂದ ಸೋನಂ, ಆವೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬದ ಆಂತರಿಕ ಕಲಹವೇ ಈ ಘಟನೆಗೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




