ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ರಕ್ಷಿತಾ ಶೆಟ್ಟಿಗೆ ಅಪಮಾನ; ಸುದೀಪ್ ಸೇರಿ ಮೂರು ಮಂದಿಯ ವಿರುದ್ಧ ಕೇಸು ದಾಖಲು

Share with

ರಾಮನಗರ: ಒಂದಿಲ್ಲೊಂದು ಕಾರಣಕ್ಕೆ ವಿವಾದವಾಗುತ್ತಿರುವ ಬಿಗ್‌ಬಾಸ್ ರಿಯಾಲಿಟಿ ಶೋ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ. ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅಪಮಾನ ಮಾಡಿದ್ದಾರೆ ಎಂದು ಕಾರ್ಯಕ್ರಮದ ನಿರೂಪಕ ನಟ ಕಿಚ್ಚ ಸುದೀಪ್, ಸ್ಪರ್ಧಿ ಅಶ್ವಿನಿಗೌಡ ಹಾಗೂ ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿರುವ ರಿಷಾಗೌಡ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರಾ ಎಂಬುವರು ದೂರು ದಾಖಲಿಸಿದ್ದಾರೆ.

ಇಲ್ಲಿನ ಎಸ್ಪಿ ಕಚೇರಿಗೆ ಸಂಧ್ಯಾ ಪವಿತ್ರ ದೂರು ನೀಡಿದ್ದು, ದೂರಿನ ಪ್ರತಿ ಸ್ವೀಕರಿಸಿರುವ ಎಸ್ಪಿ ಕಚೇರಿಯ ಡಿವೈಎಸ್ಪಿ ದೂರನ್ನು ಬಿಡದಿ ಠಾಣೆಯಲ್ಲಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬಿಡದಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶೋನಲ್ಲಿ ವಾರಾಂತ್ಯದ ಕಾರ್ಯಕ್ರಮದಲ್ಲಿ ನಿರೂಪಕ ಕಿಚ್ಚ ಸುದೀಪ್, ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರೊಂದಿಗೆ ಮಾತನಾಡುತ್ತಾ, ಅದೇ ನನ್ನ ಪಿತ್ತ ನೆತ್ತಿಗೆ ಏರುತ್ತಲ್ವಾ ಅದಕ್ಕಿಂತ ಮೊದಲು, ರಕ್ಷಿತಾ ಅವರೇ ನಾನು 2 ರೀತಿಯಲ್ಲಿ ನಗುತ್ತೇನೆ. ಒಂದು ತುಂಬಾ ನಗು ಬಂದಾಗ, ಇನ್ನೊಂದು ಏರಿದಾಗ ಎನ್ನುವ ಮಾತನ್ನಾಡಿದ್ದರು. ಇದು ದರ್ಪದ ಮಾತಾಗಿದ್ದು, ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಅವಮಾನ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ನಟ ಕಿಚ್ಚ ಸುದೀಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಅಲ್ಲದೇ ಸ್ಪರ್ಧಿ ಅಶ್ವಿನಿಗೌಡ ತಮ್ಮ ಸಹಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಎಸ್ ಕ್ಯಾಟಗರಿ ಎಂಬ ಪದ ಬಳಸಿದ್ದಾರೆ. ಇದು ಜಾತಿ ಆಧಾರಿತ ಹೇಳಿಕೆಯಾಗಿದೆ. ಮತ್ತೊಂದೆಡೆ ಸಹಸ್ಪರ್ಧಿ ಗಿಲ್ಲಿ ನಟನ ಮೇಲೆ ರಿಷಾಗೌಡ ಹಲ್ಲೆ ಮಾಡಿದ್ದಾರೆ. ಇಂಥ ಅವ್ಯವಸ್ಥೆಯನ್ನು ನೋಡಿಯೂ ಕಾರ್ಯಕ್ರಮದ ಆಯೋಜಕರು ಸುಮ್ಮನಿರುವುದು ಸರಿಯಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.


Share with

Leave a Reply

Your email address will not be published. Required fields are marked *