
ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಶನಿವಾರ(ಜ11) 1 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಯೋಧ್ಯೆ ರಾಮ ಮಂದಿರದಲ್ಲಿ ವಿಶೇಷ ಕಳೆಗಟ್ಟಿದೆ. ಬಾಲ ರಾಮನ ಮೂರ್ತಿಗೆ ಅಭಿಷೇಕ ಮಾಡುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಲಕ್ಷಾಂತರ ಭಕ್ತರು ಆಗಮಿಸಿ ರಾಮ ದರ್ಶನ ಪಡೆದರು.

ಇಂದು ಬೆಳಗ್ಗೆ ಬಾಲ ರಾಮನ ಮೂರ್ತಿಗೆ ವಿಶೇಷ ಅಭಿಷೇಕ ನಡೆಸಲಾಯಿತು. ಮೂರ್ತಿಗೆ ಪಂಡಿತರಿಂದ ವಿಶೇಷ ಪೂಜೆ, ಚಿನ್ನ, ಬೆಳ್ಳಿ ಹೊಂದಿರುವ ಪೀತಾಂಬರದಿಂದ ಅಲಂಕಾರ ಮಾಡಲಾಯಿತು. ಯಾಗ ಮಂಟಪಗಳಲ್ಲಿ ವಿಶೇಷ ಪೂಜೆ, ಹೋಮ, ಹವನನಗಳನ್ನು ನಡೆಸಲಾಯಿತು.
ಅಯೋಧ್ಯೆಯಲ್ಲಿ ಇನ್ನು 3 ದಿನಗಳ ಕಾಲ ಸೋಮವಾರದವರೆಗೆ ಭರ್ಜರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಡೀ ನಗರವನ್ನು ಹೂವಿನಿಂದ ಅಲಂಕರಿಸಲಾಗಿದೆ. 3 ದಿನವೂ ಮಧ್ಯಾಹ್ನ 2 ಗಂಟೆಗೆ ರಾಮಕಥಾ ಪಠಣೆ ನಡೆಸಲಾಗುತ್ತಿದ್ದು, ಪ್ರತಿನಿತ್ಯವೂ ಸಾಂಸ್ಕೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಗುತ್ತಿದೆ. ಬಾಲರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಬಿಗಿ ಭದ್ರತೆ ಮತ್ತು ಸಕಲ ವ್ಯವಸ್ಥೆಗಳನ್ನೂ ಮಾಡಲಾಗಿದೆ.




