ರಿಷಬ್ ಶೆಟ್ಟಿಯ ಭೇಟಿ ಮಾಡಲು ಕರ್ನಾಟಕಕ್ಕೆ ಬಂದ ರಾಣಾ ದಗ್ಗುಬಾಟಿ

Share with

ಕಾಂತಾರ’ ಸಿನಿಮಾ ರಿಷಬ್ ಶೆಟ್ಟಿಗೆ ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟವನ್ನು ನೀಡಿದೆ. ಕೇವಲ ಒಂದೇ ಸಿನಿಮಾದಿಂದ ರಿಷಬ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ ಸ್ಟಾರ್ ಆಗಿಬಿಟ್ಟಿದ್ದಾರೆ. ರಿಷಬ್ಗೆ ಈಗ ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ಅವಕಾಶಗಳು ದೊರೆತಿವೆ. ‘ಕಾಂತಾರ’ ಸಿನಿಮಾದಿಂದಾಗಿ ಅವರಿಗೆ ನೆರೆ ಹೊರೆಯ ದೊಡ್ಡ-ದೊಡ್ಡ ತಾರೆಯರ ಗೆಳೆತನ, ಆತ್ಮೀಯತೆ ಧಕ್ಕಿದೆ. ಕೆಲ ತಿಂಗಳ ಹಿಂದಷ್ಟೆ ತೆಲುಗಿನ ಸ್ಟಾರ್ ನಟ ಜೂ ಎನ್ಟಿಆರ್, ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದಿದ್ದರು. ಎನ್ಟಿಆರ್ ಅವರನ್ನು ಕುಂದಾಪುರ ಇನ್ನಿತರೆ ಕಡೆಗಳಿಗೆ ಕರೆದುಕೊಂಡು ಹೋಗಿದ್ದರು ರಿಷಬ್ ಶೆಟ್ಟಿ. ಕೆಲವು ದೇವಾಲಯಗಳ ಭೇಟಿ ಮಾಡಿಸಿದ್ದರು. ಈಗ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ರಿಷಬ್ ಶೆಟ್ಟಿಗಾಗಿ ಕರ್ನಾಟಕಕ್ಕೆ ಬಂದಿದ್ದಾರೆ.

ತೆಲುಗು ಮಾತ್ರವೇ ಅಲ್ಲದೆ ಬಾಲಿವುಡ್ನಲ್ಲಿಯೂ ಹೆಸರು ಮಾಡಿರುವ ನಟ, ನಿರ್ಮಾಪಕ, ವಿತರಕ ರಾಣಾ ದಗ್ಗುಬಾಟಿ ಕೆಲ ದಿನಗಳ ಹಿಂದೆ, ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಕರ್ನಾಟಕಕ್ಕೆ ಬಂದಿದ್ದರು. ಅಂದಹಾಗೆ ರಾಣಾ ದಗ್ಗುಬಾಟಿ, ರಿಷಬ್ ಶೆಟ್ಟಿಯನ್ನು ಭೇಟಿ ಆಗಿರುವುದು ಯಾವುದೋ ಸಿನಿಮಾ ಕಾರಣಕ್ಕೆ ಅಲ್ಲ ಬದಲಿಗೆ, ಒಟಿಟಿ ಶೋ ಕಾರಣಕ್ಕೆ!

ರಾಣಾ ದಗ್ಗುಬಾಟಿ ಹೊಸದೊಂದು ಒಟಿಟಿ ಶೋ ನಿರೂಪಣೆ ಮಾಡುತ್ತಿದ್ದಾರೆ. ಶೋನ ಹೋಸ್ಟ್ ಅವರು, ವಿವಿಧ ಚಿತ್ರರಂಗದ ಸ್ಟಾರ್ ನಟ, ನಟಿಯರೊಟ್ಟಿಗೆ ಆಪ್ತವಾಗಿ ಚರ್ಚೆ ಮಾಡುತ್ತಾರೆ. ಕೆಲವು ಗೇಮ್ಗಳನ್ನು ಆಡುತ್ತಾರೆ. ಬಹುತೇಕ ಶೋಗಳ ರೀತಿ ಸೆಟ್ನಲ್ಲಿ ಕೂತು ಸಂದರ್ಶನಗಳನ್ನು ಮಾಡುವುದಿಲ್ಲ ರಾಣಾ ದಗ್ಗುಬಾಟಿ ಬದಲಿಗೆ ಔಟ್ಡೋರ್ಗೆ ಹೋಗಿ ಅಲ್ಲಿಯೇ ನಟ-ನಟಿಯರ ಸಂದರ್ಶನ ಮಾಡುತ್ತಾರೆ. ಇದೇ ಕಾರಣಕ್ಕೆ ಅವರು ರಿಷಬ್ ಶೆಟ್ಟಿಯ ಸಂದರ್ಶನ ಮಾಡಲು ಕರ್ನಾಟಕಕ್ಕೆ ಆಗಮಿಸಿದ್ದರು.

ರಿಷಬ್ ಶೆಟ್ಟಿ ಇದೀಗ ಕುಂದಾಪುರದ ಬಳಿ ‘ಕಾಂತಾರ’ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲಿಗೆ ಆಗಮಿಸಿರುವ ರಾಣಾ ದಗ್ಗುಬಾಟಿ ಕುಂದಾಪುರ ಮತ್ತಿತರೆ ಸುಂದರ ಸ್ಥಳಗಳಲ್ಲಿ ರಿಷಬ್ ಶೆಟ್ಟಿಯ ಸಂದರ್ಶನ ಮಾಡಿದ್ದಾರೆ. ಸಮುದ್ರ ದಡದಲ್ಲಿ ರಾಣಾ ಹಾಗೂ ರಿಷಬ್ ಆಪ್ತ ಸಂಭಾಷಣೆ ನಡೆಸಿದ್ದಾರೆ. ರಾಣಾ ದಗ್ಗುಬಾಟಿಯ ಶೋಗೆ ‘ದಿ ರಾಣಾ ಶೋ’ ಎಂದು ಹೆಸರಿಡಲಾಗಿದೆ. ಈ ಟಾಕ್ ಶೋ ಅಮೆಜಾನ್ ಪ್ರೈಂನಲ್ಲಿ ಪ್ರಸಾರ ಆಗಲಿದೆ.

ರಾಣಾ ದಗ್ಗುಬಾಟಿ ಶೋನಲ್ಲಿ ರಿಷಬ್ ಶೆಟ್ಟಿ ಮಾತ್ರವೇ ಅಲ್ಲದೆ ಹಲವಾರು ತಾರೆಯರು ಕಾಣಿಸಿಕೊಂಡಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಅವರ ಎಪಿಸೋಡ್ ಈಗಾಗಲೇ ಪ್ರಸಾರವಾಗಿದೆ. ನವೆಂಬರ್ 23 ರಂದು ಶೋ ಲಾಂಚ್ ಆಗಿದ್ದು, ಈ ಶೋನಲ್ಲಿ ಎಸ್ಎಸ್ ರಾಜಮೌಳಿ, ರಾಮ್ ಗೋಪಾಲ್ ವರ್ಮಾ, ನಟರಾದ ನಾಗ ಚೈತನ್ಯ, ದುಲ್ಕರ್ ಸಲ್ಮಾನ್, ಸಿದ್ದು ಜೊನ್ನಲಗಡ್ಡ, ನಟಿಯರಾದ ಶ್ರೀಲೀಲಾ ಸೇರಿದಂತೆ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದಾರೆ.

ಬಿಡುಗಡೆ ಆಗಿರುವ ಪ್ರೋಮೋನಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ರಾಣಾ ದಗ್ಗುಬಾಟಿಯನ್ನು ತಮ್ಮ ಊರಾದ ಕೆರಾಡಿಯ ಶಾಲೆಗೆ ಕರೆದುಕೊಂಡು ಹೋಗಿ ಅಲ್ಲಿನ ಕತೆಗಳನ್ನು ಹೇಳಿದ್ದಾರೆ. ಊರಿನ ಕತೆಗಳನ್ನು ರಾಣಾ ದಗ್ಗುಬಾಟಿ ಜೊತೆಗೆ ಹಂಚಿಕೊಂಡಿದ್ದಾರೆ ರಿಷಬ್ ಶೆಟ್ಟಿ. ಅಂದಹಾಗೆ ಈ ಶೋಗೆ ರಾಣಾ ದಗ್ಗುಬಾಟಿಯ ಪತ್ನಿ ಮಿಹಿಕಾ ಬಜಾಜ್ ಸಹ ಅತಿಥಿಯಾಗಿ ಆಗಮಿಸಿದ್ದಾರೆ. ಶೋನಲ್ಲಿ ಪತಿಯ ಕಾಲೆಳೆದಿದ್ದಾರೆ.


Share with

Leave a Reply

Your email address will not be published. Required fields are marked *