“ಸೌಜನ್ಯಳ ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ಅನುಮಾನಿಸುವ, ಹೀಯಾಳಿಸುವ ಬದಲು ಪ್ರಕರಣವನ್ನು ಮರುತನಿಖೆ ನಡೆಸಿ ಅತ್ಯಾಚಾರ ಮಾಡಿದವರನ್ನು ಶಿಕ್ಷೆಗೆ ಒಳಪಡಿಸಿ. ನಾನೇ ಆರೋಪಿಯಾಗಿದ್ದರೂ ಸರಿ ಗಲ್ಲಿಗೇರಿಸಿ” ಎಂದು ರಾ.ಹಿಂ.ಜಾ.ವೇದಿಕೆಯ ಸಂಚಾಲಕ, ಹಾಗೂ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಗ್ರಹಿಸಿದ್ದಾರೆ. ಸುಳ್ಯದ ನಿಂತಿಕಲ್ಲಿನಿಂದ ಜಾಥಾದೊಂದಿಗೆ ಆಗಮಿಸಿ ಸುಳ್ಯ ಬಸ್ ನಿಲ್ದಾಣ ಬಳಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
‘ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೊಡ್ಡವರ ಹೆಸರೆತ್ತಿದರೆ ನಾಚಿಕೆಯಾಗುತ್ತದೆ. ಹಾಗಾದ್ರೆ ಕಳೆದ ಹನ್ನೊಂದು ವರ್ಷಗಳಿಂದ ಸೌಜನ್ಯ ಕುಟುಂಬ ಎಷ್ಟು ಮಾನಸಿಕ ಹಿಂಸೆ ಅನುಭವಿಸಿರಬಹುದು. ಇತ್ತೀಚೆಗೆ ಹೋರಾಟಗಾರರನ್ನೇ ಅವಮಾನಿಸುವ, ಅನುಮಾನಿಸುವ ನಿಮ್ಮ ಮನಸ್ಥಿತಿ ಎಂತಹ ನೀಚ ಮಟ್ಟದ್ದು ಎಂಬುದು ಅರ್ಥವಾಗುತ್ತದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯೇ ನಿಮಗೆ ಸರಿಯಾದ ಶಿಕ್ಷೆ ನೀಡುತ್ತಾನೆ’ ಎಂದವರು ಹೇಳಿದರು.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರಬಲ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ದಿ.ಸೌಜನ್ಯಳ ತಾಯಿ ಕುಸುಮಾವತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.