ಉಪ್ಪಿನಂಗಡಿ: ಮುಂಗಾರು ಮಳೆ ಆರಂಭವಾಗುವರೆಗೆ ನೀರನ್ನು ಮಿತವಾಗಿ ಬಳಸುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.
ಗ್ರಾಮೀಣ ನೀರು ಪೂರೈಕೆ ಯೋಜನೆಗಳಿಗೆ ನೀರು ಲಭ್ಯತೆಯನ್ನು ಖಾತರಿ ಪಡಿಸುವ ಸಲುವಾಗಿ ಬಿಳಿಯೂರು ಅಣೆಕಟ್ಟಿನಲ್ಲಿ ಸಂಗ್ರಹವಿರುವ ನೀರನ್ನು ಎ ಎಂ ಆರ್ ಅಣೆಕಟ್ಟಿಗೆ ಇಂದು ಹರಿಸಲಾಗುತ್ತಿದ್ದು, ಈಗಾಗಲೇ ಕೈಗಾರಿಕೆ ಮತ್ತು ಕೃಷಿಗೆ ಅಣೆಕಟ್ಟು ನೀರು ಬಳಕೆಯನ್ನು ನಿಷೇಧಿಸಲಾಗಿದೆ. ನಾಗರಿಕರು ನೀರನ್ನು ಮಿತವಾಗಿ ಹಾಗೂ ಜವಾಬ್ಧಾರಿಯುತವಾಗಿ ಬಳಕೆ ಮಾಡಬೇಕು. ರೈತರು ಮತ್ತು ಕೈಗಾರಿಕೆಗಳು ಸಂಪೂರ್ಣ ಸಹಕಾರ ನೀಡುವ ಮೂಲಕ ಲಭ್ಯ ಇರುವ ನೀರನ್ನು ಮಳೆಗಾಲ ಆರಂಭವಾಗುವವರೆಗೆ ಬಳಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಮಂಗಳೂರು ನಗರ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ತುಂಬೆ ಅಣೆಕಟ್ಟಿನ ಸುತ್ತಮುತ್ತ ಕೃಷಿಗೆ ನೀರು ಉಪಯೋಗಿಸುವುದನ್ನು ಸಂಪೂರ್ಣವಾಗಿ ತಡೆಹಿಡಿಯಲು ದ.ಕ. ಜಿಲ್ಲಾಧಿಕಾರಿ ಈಗಾಗಲೇ ಆದೇಶಿಸಿದ್ದಾರೆ.
“ಕೈಗಾರಿಕೆಗಳಿಗೂ ನೀರಿನ ಮಟ್ಟವನ್ನು ಅನುಸರಿಸಿ ನೀರು ಪೂರೈಕೆಯಲ್ಲಿ ಕಡಿತ ಮಾಡುವಂತೆ ಸೂಚಿಸಲಾಗಿದೆ. ಸದ್ಯ ತುಂಬೆ ಅಣೆಕಟ್ಟು, ಎಎಂಆರ್ ಹಾಗೂ ಬಿಳಿಯೂರು ಅಣೆಕಟ್ಟಿನಲ್ಲಿ ನೀರು ಸಂಗ್ರಹ ಇರುವುದರಿಂದ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ರೇಶನಿಂಗ್ ಮಾಡಲಾಗುತ್ತಿಲ್ಲ” ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ತಿಳಿಸಿದ್ದಾರೆ.