ಕಾಸರಗೋಡಿನಲ್ಲಿ ಕನ್ನಡಕ್ಕೆ ಪ್ರಾತಿನಿಧ್ಯ: 2 ತಿಂಗಳಲ್ಲಿ ನಿರ್ಧರಿಸಲು ಕೇರಳ ಕೋರ್ಟ್ ಆದೇಶ

Share with

ತಿರುವನಂತಪುರ: ಕೇರಳದ ಕಾಸರಗೋಡು ತಾಲೂಕಿನಲ್ಲಿ ನಡೆಸುವ ಸರ್ಕಾರಿ ವ್ಯವಹಾರಗಳಲ್ಲಿ ಕನ್ನಡ ಬಳಕೆ ಮಾಡುವ ಬಗ್ಗೆ 2 ತಿಂಗಳಿನೊಳಗೆ ಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.

ಕಾಸರಗೋಡಿನ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡುವ 1982ರ ಸುತ್ತೋಲೆಯನ್ನು ಜಾರಿ ಮಾಡಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಬಗ್ಗೆ ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಪೀಠ ಹೇಳಿದೆ. ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಸರ್ಕಾರಿ ಇಲಾಖೆಗಳ ಕಚೇರಿಗಳಲ್ಲಿ ಕನ್ನಡದಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದ ಕಾಸರಗೋಡು ಮೂಲದ ವಕೀಲರೊಬ್ಬರು ಈ ಸಂಬಂಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೆನ್ ಹಾಗೂ ನ್ಯಾ.ಶ್ಯಾಮ್ ಕುಮಾ‌ರ್.ವಿ.ಎಂ. ಅವರಿದ್ದ ಪೀಠವು ಈ ಸಂಬಂಧ ಅರ್ಜಿ ವಿಚಾರಣೆಯನ್ನು ನಡೆಸಿದ್ದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದಲ್ಲದೇ, 1982ರ ಸುತ್ತೋಲೆಯನ್ನು ಜಾರಿ ಮಾಡುವ ಸಂಬಂಧ ಸಂಬಂಧಿತ ಇಲಾಖೆಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆಯೂ ಕೋರಿ ಜನವರಿಯಲ್ಲೇ ರಾಜ್ಯ ಸರ್ಕಾರಕ್ಕೂ ಅರ್ಜಿ ಸಲ್ಲಿಸಲಾಗಿದೆಯಾದರೂ, ಈ ಬಗ್ಗೆ ಯಾವುದೇ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ ಎಂದು ವಕೀಲರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ರಾಜ್ಯ ಸರ್ಕಾರವು ಕೋರ್ಟ್‌ಗೆ ಮಾಹಿತಿ ನೀಡಿದ್ದು ಕೋರ್ಟ್ ಈ ಬಗ್ಗೆ ನಿರ್ದೇಶನ ನೀಡಿದರೆ ಸೂಕ್ತ ಪ್ರಾಧಿಕಾರವು ಈ ಅರ್ಜಿಯನ್ನು ಪರಿಶೀಲನೆ ನಡೆಸಿ ಬಳಿಕ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದೆ. ಹಾಗಾಗಿ ಅರ್ಜಿಯನ್ನು ವಿಲೇವಾರಿ ಮಾಡಿರುವ ಪೀಠವು, ಈ ತೀರ್ಪಿನ ಪ್ರತಿಯನ್ನು ಸ್ವೀಕರಿಸಿದ ದಿನಾಂಕದಿಂದ 8 ವಾರಗಳ ಅವಧಿಯ ಬಳಿಕ, ಅರ್ಜಿದಾರರಿಗೂ ವಿಚಾರಣೆಗೆ ಸಮಂಜಸವಾದ ಅವಕಾಶವನ್ನು ನೀಡಿದ ನಂತರ, ಕಾನೂನಿನ ಪ್ರಕಾರ ಈ ಬಗ್ಗೆ ಪರಿಗಣನೆ ಮಾಡಿ ನಿರ್ಧರಿಸಬೇಕು ಎಂದು ಹೇಳಿದೆ. ಅದಾದ ಬಳಿಕ ನಿರ್ಣಯದ ಆದೇಶವನ್ನು ಅರ್ಜಿದಾರರಿಗೆ ಒಂದು ವಾರದೊಳಗೆ ತಿಳಿಸಬೇಕು ಎಂದು ಸಹ ಪೀಠವು ತಿಳಿಸಿದೆ.


Share with

Leave a Reply

Your email address will not be published. Required fields are marked *