ಮಂಗಳೂರು: ಮಂಗಳೂರು-ಬೆಂಗಳೂರು ಮಧ್ಯೆ ವಂದೇ ಭಾರತ್ ರೈಲು ಆರಂಭಿಸುವಂತೆ ಕೇಂದ್ರ ರೇಲ್ವೇ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಮಂಗಳೂರು ವಿದ್ಯಾಸಂಸ್ಥೆಗಳು, ಉದ್ಯಮಿಗಳಿಂದ ಕೂಡಿದ ನಗರವಾಗಿದ್ದು ಬೆಂಗಳೂರಿನ ಅನಂತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿದೆ. ಉತ್ತಮ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು, ಹಲವಾರು ಉದ್ಯಮಗಳಿವೆ. ದಿನವೊಂದಕ್ಕೆ ಸಾವಿರಾರು ಜನರು ಪ್ರಯಾಣಿಸುತ್ತಿದ್ದು ವಂದೇ ಭಾರತ್ ಆರಂಭಿಸಿದರೆ ಉದ್ಯಮಗಳ ಬೆಳವಣಿಗೆಗೂ ಅನುಕೂಲವಾಗಲಿದೆ.
ಹಾಗಾಗಿ ಮಂಗಳೂರು-ಬೆಂಗಳೂರು ನಡುವೆ ದಿನಕ್ಕೆ 3 ವಂದೇ ಭಾರತ್ ರೈಲು ಪ್ರಾರಂಭಿಸಬೇಕು ಎಂದು ಅವರು ರಾಜ್ಯ ಸರಕಾರದ ಪರವಾಗಿ ಪತ್ರದಲ್ಲಿ ಮನವಿ ಮಾಡಿದ್ದಾರೆ.




