
ಉಡುಪಿ: ಬೇಟೆ ಅರಸಿ ಬಂದ ಕರಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಶೇಖರ್ ಶೆಟ್ಟಿ ಎಂಬವರ ರಬ್ಬರ್ ತೋಟದ ಸಮೀಪವೇ ಇರುವ ಕೃಷ್ಣ ನಾಯ್ಕ್ ಎಂಬವರ ಜಾಗದಲ್ಲಿರುವ ತೆರೆದ ಬಾವಿಗೆ ಕರಿ ಚಿರತೆ ಬಿದ್ದಿದೆ ಎನ್ನಲಾಗಿದೆ. ಬಾವಿಯಲ್ಲಿ ಚಿರತೆ ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣೆಗೆ ಮುಂದಾದರು. ಆದರೆ ಕಾರ್ಯಾಚರಣೆ ವೇಳೆ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಹೋಗಿದೆ. ಈ ಮೂಲಕ ಕರಿ ಚಿರತೆ ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಬಂದು ಕಾಡು ಪ್ರದೇಶ ಸೇರಿದೆ ಎಂದು ತಿಳಿದುಬಂದಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಲ್ಲಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿ ಕಾರಿ ನಾಗರಾಜ ಮತ್ತು ಸಿಬ್ಬಂದಿ, ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.





