ಮೃತ ಅನಾಥ ಮಹಿಳೆಗೆ ಉತ್ತರಕ್ರಿಯೆ ನೆರವೇರಿಸಿ ಮಾದರಿಯಾದ ಯುವ ಎಂಜಿನಿಯರ್!

Share with

ಬಂಟ್ವಾಳ: ಹಲವು ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಕುಚ್ಚಿಗುಡ್ಡೆ ನಿವಾಸಿ ಬಾಗಿ ಅವರು ಇತ್ತೀಚೆಗೆ ನಿಧನರಾಗಿದ್ದು ಅವರ ಕುಟುಂಬ ಬಂಧುಗಳಿಲ್ಲದ ಕಾರಣ ಯುವ ಎಂಜಿನಿಯರ್, ಬಂಟ್ವಾಳ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಉತ್ತರ ಕ್ರಿಯೆ ನೆರವೇರಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ಕುಚ್ಚಿಗುಡ್ಡೆಯಲ್ಲಿ ಹಲವು ವರ್ಷಗಳಿಂದ ಜೀವನ ನಡೆಸಿಕೊಂಡು ಬರುತ್ತಿದ್ದ ಬಾಡ ಹಾಗೂ ನೊಕ್ಕೆ ಕುಟುಂಬ ಬಡತನದಿಂದ‌ ಸ್ವಂತ ಮನೆಯನ್ನು ಹೊಂದಲು ಸಾಧ್ಯವಾಗದೆ ಜೋಪಡಿಯೊಂದರಲ್ಲಿ ಜೀವನ ಕಳೆಯುತ್ತಿದ್ದರು. ತಂದೆ, ತಾಯಿ ಹಾಗೂ ಮನೆಗೆ ಆಧಾರವಾಗಿದ್ದ ಸಹೋದರ ಅನಾರೋಗ್ಯದಿಂದ ಮೃತಪಟ್ಟ ಬಳಿಕ ದಿಕ್ಕು ತೋಚದ ಕುಟುಂಬಕ್ಕೆ ಎಂಜಿನಿಯರ್ ಶೈಲೇಶ್ ಪೂಜಾರಿ ಆಸರೆಯಾಗಿ ನಿಂತು ಗೆಳೆಯರ ಸಹಕಾರದಿಂದ‌ ಮನೆಯನ್ನು ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದಿದ್ದರು. ಫೆ.29 ರಂದು ಶಾಸ್ತ್ರೋಕ್ತವಾಗಿ ಗ್ರಹಪ್ರವೇಶ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದರು.ಈ ಮನೆಯಲ್ಲಿ ಬಾಗಿ ಹಾಗೂ ಕಮಲ ಸಹೋದರಿಯರು ಮಾತ್ರ ಜೀವಿಸುತ್ತಿದ್ದು ದೈನಂದಿನ ಊಟ, ಉಪಹಾರವನ್ನು ಶೈಲೇಶ್ ಅವರೇ ನೀಡಿ ಸಂತೈಸಿದ್ದರು. ಹಲವು ಸಮಯದಿಂದ ಕಾಯಿಲೆಯಿಂದ‌ ಹಾಸಿಗೆ ಹಿಡಿದಿದ್ದ ಬಾಗಿ ಅವರಿಗೆ ಜಯಶಂಕರ್ ಕಾನ್ಸಲೆ, ಸಜೀಪನಡು ಪ್ರಾ. ಆರೋಗ್ಯ ಕೇಂದ್ರದ ವೈದ್ಯ ಡಾ. ತುಫೈಲ್ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಮನೆಯಲ್ಲಿಯೇ ಚಿಕಿತ್ಸೆಯನ್ನು ಒದಗಿಸಿದ್ದರು. ಕೆಲ ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಬಾಗಿ ಮೃತಪಟ್ಟಾಗ ಜಯಶಂಕರ್ ಕಾನ್ಸಲೆ, ಸಜೀಪಮೂಡ ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಶೆಟ್ಟಿ, ಸೇಸಪ್ಪ ಬೆದ್ರಕಾಡು, ಮೋಹನದಾಸ್ ಪೂಜಾರಿ ಬೊಳ್ಳಾಯಿ, ನಾರಾಯಣ ಬೊಳ್ಳಾಯಿ ಮುಂದೆ ನಿಂತು ಶವಸಂಸ್ಕಾರ ನೆರವೇರಿಸಿದ್ದಾರೆ. ಶೈಲೇಶ್ ಪೂಜಾರಿಯವರ ಮುಂದಾಳತ್ವದಲ್ಲಿ ಸೋಮವಾರ ನಂದಾವರದ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದಲ್ಲಿ ಪಿಂಡ ಪ್ರಧಾನ ಸಹಿತ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉತ್ತರ ಕ್ರಿಯೆ ನಡೆಸಿ ಮೃತ ಬಾಗಿ ಅವರ ಆತ್ಮಕ್ಕೆ ಸದ್ಗತಿ ನೀಡಲಾಯಿತು. ಈ ಸಂದರ್ಭ ಜಯಶಂಕರ್ ಕಾನ್ಸಲೆ,
ಮೋಹನ್ ದಾಸ್ ಪೂಜಾರಿ, ದಲಿತ ಸಂಘಟನೆಗಳ ಮುಖಂಡರಾದ ಸೇಸಪ್ಪ ಬೆದ್ರಕಾಡು, ಸತೀಶ್ ಅರಳ
ಮತ್ತಿತರರು ಉಪಸ್ಥಿತರಿದ್ದರು. ಈಗ ಏಕಾಂಗಿಯಾಗಿರುವ ಕಮಲ‌ ಅವರಿಗೂ ಶೈಲೇಜ್ ಪೂಜಾರಿಯವರೇ ಊಟ ಉಪಹಾರವನ್ನು ನೀಡುತ್ತಿದ್ದಾರೆ.‌ ಶೈಲೇಶ್ ಪೂಜಾರಿ ಮತ್ತವರ ತಂಡದ ನಿಸ್ವಾರ್ಥ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.


Share with

Leave a Reply

Your email address will not be published. Required fields are marked *