ವಿಧಾನಸಭೆ: ಬೇಸಿಗೆ ಹಿನ್ನೆಲೆಯಲ್ಲಿ ಸದ್ಯ ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರ ಪರ್ವತ ಚಾರಣ ನಿರ್ಬಂಧಿಸಿದ್ದು, ಮಳೆಗಾಲದ ನಂತರ ಪುನಃ ಆರಂಭಿಸಲಾಗುತ್ತದೆ. ಆಗ ಬೆಳಗ್ಗೆ 5.30ರಿಂದಲೇ ಚಾರಣಕ್ಕೆ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ವಿಧಾನಸಭೆಯ ಪ್ರಶೋತ್ತರ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಭಾಗೀರಥಿ ಮುರುಳ್ಯ, ಹಿಂದಿನಂತೆ ಬೆಳಗಿನ ಜಾವ 5.30ರಿಂದಲೇ ಚಾರಣಕ್ಕೆ ಅವಕಾಶ ನೀಡುವಂತೆ ಕೋರಿದರು. ಸಚಿವ ಖಂಡ್ರೆ ಉತ್ತರಿಸಿ, ಚಾರಣಕ್ಕಾಗಿ 2-3 ಸಾವಿರ ಜನರು ಒಮ್ಮೆಲೇ ಬಂದರೆ ಅರಣ್ಯ ಪರಿಸರಕ್ಕೆ ಅಡಚಣೆ ಆಗುತ್ತದೆ. ನಿತ್ಯ 150 ಜನರಿಗೆ ಸೀಮಿತಗೊಳಿಸಿ, ಮಳೆಗಾಲದ ನಂತರ ಬುಕಿಂಗ್ ತೆರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಖಂಡ್ರೆ, ಬೀದಳ್ಳಿ- ಕುಮಾರಪರ್ವತ- ಬೀದಳ್ಳಿ ನಡುವಿನ 14 ಕಿ.ಮೀ. ಕ್ರಮಿಸಲು 6ರಿಂದ 7 ಗಂಟೆ ಬೇಕಾಗುತ್ತದೆ. ಬೀದಳ್ಳಿ- ಕುಮಾರಪರ್ವತ-ಸುಬ್ರಮಣ್ಯ ನಡುವಿನ 19 ಕಿ.ಮೀ. ಚಾರಣಕ್ಕೆ 10 ರಿಂದ 12 ಗಂಟೆ ಬೇಕು. ಸುಬ್ರಮಣ್ಯ- ಶೇಷಪರ್ವತ- ಸುಬ್ರಹ್ಮಣ್ಯ ನಡುವಿನ 20 ಕಿ.ಮೀ. ಚಾರಣಕ್ಕೆ 12 ಗಂಟೆ ಬೇಕು. ಶೇಷಪರ್ವತ ತಲುಪುವುದನ್ನೇ ತಡ ಮಾಡಿದರೆ, ಹಿಂದಿರುಗುವ ವೇಳೆಗೆ ಕತ್ತಲಾಗುತ್ತದೆ. ಹೀಗಾಗಿ ಬೇಗ ಹೋಗಿ, ಬೇಗ ಬರಬೇಕು ಎಂದರು.
ಕುಮಾರಪರ್ವತ ಚಾರಣಕ್ಕಾಗಿ 2-3 ಸಾವಿರ ಜನರು ಒಮ್ಮೆಲೇ ಬಂದರೆ ಅರಣ್ಯ ಪರಿಸರಕ್ಕೆ ಅಡಚಣೆ ಆಗುತ್ತಿದೆ. ಹೀಗಾಗಿ ನಿತ್ಯ 150 ಜನರಿಗೆ ಸೀಮಿತಗೊಳಿಸಿ, ಆನ್ಲೈನ್ ಬುಕಿಂಗ್ಗೆ ಅವಕಾಶ ಮಾಡಿಕೊಟ್ಟಿದ್ದೇವೆ. ದೇವರಗದ್ದೆ, ಗಿರಿಗದ್ದೆ ಸೇರಿದಂತೆ ಪರ್ವತದ ಯಾವುದೇ ಭಾಗದಲ್ಲಿ ತಂಗಲು ಅಥವಾ ವಾಸ್ತವ್ಯ ಹೂಡಲು ಅವಕಾಶ ಇರುವುದಿಲ್ಲ. ಸದ್ಯ ಬೇಸಿಗೆಯಲ್ಲಿ ಕಾಡ್ಲಿಚ್ಚಿನ ಭೀತಿ ಇರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಚಾರಣ ನಿರ್ಬಂಧಿಸಿದ್ದು, ಮಳೆಗಾಲದಲ್ಲಿ ಚಾರಣ ಅಸಾಧ್ಯವಾದ್ದರಿಂದ ಮಳೆಗಾಲದ ನಂತರ ಬುಕಿಂಗ್ ತೆರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.




