ವಿಟ್ಲ: ಬಂಟ್ವಾಳ ಕಡೇಶಿವಾಲಯ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ನಿವೃತ್ತ ಅಡುಗೆ ಸಿಬ್ಬಂದಿ ಜಾನಕಿ ಎ. ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಮಾಜ ಕಲ್ಯಾಣ ಇಲಾಖೆಯ ಬಂಟ್ವಾಳ ತಾಲೂಕು ಪ್ರಭಾರ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಬಿ. ಸನ್ಮಾನಿಸಿ ಮಾತನಾಡಿ ಶಾಲೆಯ ಬೆಳವಣಿಗೆ ಮತ್ತು ನಿಲಯದ ಸಮರ್ಪಕ ನಿರ್ವಹಣೆಯಲ್ಲಿ ಬೋಧಕೇತರ ಸಿಬ್ಬಂದಿಯ ಪಾತ್ರವೂ ಮಹತ್ತರವಾಗಿದೆ. ಸುಮಾರು 33 ವರ್ಷಗಳಷ್ಟು ವಿವಿಧ ವಿದ್ಯಾರ್ಥಿ ನಿಲಯ ಮತ್ತು ಆಶ್ರಮ ಶಾಲೆಗಳಲ್ಲಿ ಅಡುಗೆಯವರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಾನಕಿ ಎ. ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ ಮತ್ತು ವಿದ್ಯಾರ್ಥಿಗಳ ಮೇಲೆ ತೋರಿಸುತ್ತಿದ್ದ ಪ್ರೀತಿ ಕಿರಿಯ ಸಿಬ್ಬಂದಿಗಳಿಗೆ ಅನುಕರಣೀಯ ಎಂದು ಕಡೇಶಿವಾಲಯ ವಾಲ್ಮೀಕಿ ಆಶ್ರಮ ಶಾಲೆಯ ಮೇಲ್ವಿಚಾರಕಿ ಭವ್ಯ ಪಿ. ಸನ್ಮಾನಿತರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಡೇಶಿವಾಲಯ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಭಾರತಿ ಯಸ್. ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಕನ್ಯಾನ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ಪ್ರಮೀಳ ಹೆಚ್., ಮುಖ್ಯ ಶಿಕ್ಷಕಿ ಯಶೋಧ ಯಸ್. ಮತ್ತು ಆಶ್ರಮ ಶಾಲೆಯ ಬೋಧಕೇತರ ಸಿಬ್ಬಂದಿ ಮತ್ತು ಕಡೇಶಿವಾಲಯ ಗ್ರಾಮ ಪಂಚಾಯತ್‍ನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ವೇತ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ವನಿತ ಸ್ವಾಗತಿಸಿ, ಧನಲಕ್ಷೀ ವಂದಿಸಿದರು. ಶಿಕ್ಷಕಿ ವಿದ್ಯಾ ಎ. ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.