ಅರಳ ಗ್ರಾಮದ ರಸ್ತೆ ಮತ್ತು  ಚರಂಡಿ ವ್ಯವಸ್ತೆ
ಬಂಗೇರ ಬೆಟ್ಟು ಅರಳ ಪೋಸ್ಟ್ ಬಂಟ್ವಾಳ ತಾಲೂಕ್

Share with


ಒಂದು ದೇಶದ ಉನ್ನತಿ ಅಥವಾ ಅವನತಿಯಲ್ಲಿ ಪ್ರಧಾನ ಪಾತ್ರವಹಿಸುವುದು ಆ ದೇಶದ ಗ್ರಾಮಗಳು. ಗ್ರಾಮಗಳಲ್ಲಿ ಬೆಳೆಯುವ ಕೃಷಿ ಉತ್ಪನ್ನಗಳು ನಗರ ಪ್ರದೇಶಕ್ಕೆ ತಲುಪಿದಾಗಲೇ ನಗರ ಪ್ರದೇಶ ಸುಭೀಕ್ಷವಾಗಲು ಸಾಧ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳೇ ಕಳೆದು ಹೋದರೂ ಹಳ್ಳಿಗಳ ಅಭಿವೃದ್ಧಿ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಪ್ರಸ್ತುತ ದೇಶದಲ್ಲಿರುವ ಜನಪ್ರತಿನಿಧಿಗಳಿಗೆ ನಗರಗಳ ಅಭಿವೃದ್ಧಿಯಲ್ಲಿ ಇರುವ ಆಸಕ್ತಿ ಗ್ರಾಮಗಳ ಅಭಿವೃದ್ಧಿಯಲ್ಲಿ ಇಲ್ಲವಾಗಿದೆ. ದುಡಿಯುವ ಜನರಲ್ಲಿ ಶೇ. ೫೦ರಷ್ಟು ಜನರು ಈಗಲೂ ಗುಡಿಸಲಿನಲ್ಲೇ ವಾಸ ಮಾಡುತ್ತಿದ್ದಾರೆ. ಇಂತಹ ಮನೆಗಳಲ್ಲಿ ಸಮರ್ಪಕವಾದ ಗಾಳಿ ಬೆಳಕಿಗೂ ಅವಕಾಶವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜನರು ವಾಸ ಮಾಡುತ್ತಿರುವುದು ದೇಶದ ಅಭಿವೃದ್ಧಿಗೆ ಹಿಡಿದ ಕನ್ನಡಿಯಂತಿದೆ.
ಗ್ರಾಮೀಣ ಭಾಗದಲ್ಲಿ ಇಂದಿಗೂ ಕಸ ವಿಲೇವಾರಿ, ಚರಂಡಿ ವ್ಯವಸ್ಥೆ ಸೂಕ್ತವಾಗಿಲ್ಲ. ಕೃಷಿಕರಿಗೆ ವೈಜ್ಞಾನಿಕ ಬೆಲೆ ಇಂದಿಗೂ ಮರೀಚಿಕೆಯಾಗಿಯೇ ಉಳಿದಿದೆ. ಕೃಷಿಕರಿಗೆ ತಾವು ಬೆಳೆದ ಬೆಳೆಗೆ ಕೇವಲ ಶೇ. ೩೦ರಷ್ಟು ಹಣ ಮಾತ್ರವೇ ಸಿಗುತ್ತಿದೆ. ಉಳಿದ ಶೇ. ೭೦ರಷ್ಟು ಪಾಲು ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳ ಪಾಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಹಾಗೂ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ, ಮಳೆ ಬಂದು ನಿಂತ ನೀರಿನಲ್ಲಿ ಸೊಳ್ಳೆ ನೊಣಗಳ ಉತ್ಪತ್ತಿಯಾಗುವುದರಿಂದ ಗ್ರಾಮಗಳು ರೋಗರುಜಿನಗಳ ತಾಣಗಳಾಗುತ್ತಿವೆ. ಅಲ್ಲದೇ, ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹೆರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸರಿಯಾದ ರಸ್ತೆ ವ್ಯವಸ್ಥೆ, ವಾಹನ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಗಿದೆ. ಇನ್ನಾದರೂ ಎಚ್ಚೆತುಕೊಂಡು, ಹಳ್ಳಿಯಲ್ಲಿ ನಡೆಯಬಹುದಾದ ಕಳಪೆ ಕಾಮಗಾರಿಗಳ ವಿರುದ್ಧ ತರುಣ ಸಮಾಜ ಎದ್ದು ನಿಂತು ಪ್ರತಿಭಟಿಸಬೇಕಿದೆ. ಜೊತೆಗೆ ಅಧಿಕಾರಿಗಳು ಗ್ರಾಮೀಣ ಮಟ್ಟಕ್ಕೂ ಸೂಕ್ತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಕಾರ್ಯಪ್ರವೃತ್ತರಾಗಬೇಕಿದೆ.


Share with

Leave a Reply

Your email address will not be published. Required fields are marked *