ಮಂಗಳೂರು: ಮಂಗಳೂರು ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಮತ್ತು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮುಲ್ಕಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ದಾವಣಗೆರೆ ಜಿಲ್ಲೆಯವರಾಗಿದ್ದು, ಹೊನ್ನೂರು ಮಲಟ್ಟೆ ಹಳ್ಳಿ ಬಾಪೂಜಿ ಬಡಾವಣೆ ನಿವಾಸಿಗಳಾದ ರಘು ಎಸ್(30), ಮಂಜುನಾಥ(28), ವಿನೋಬ ನಗರ ನಿವಾಸಿ ಪ್ರಮೋದ್ ವಿ(23), ಅವರಗೆರೆ ಗೋಶಾಲೆ ಬಳಿಯ ನಿವಾಸಿ ಎಚ್.ರವಿಕಿರಣ್(23), ಅವರಗೆರೆ ಪಿ.ಬಿ ಬಡಾವಣೆ ನಿವಾಸಿ ದಾವಲ ಸಾಬ್ ಎಚ್(25) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ಕಳವು ಮಾಡಿದ್ದ ಒಂದು ಹೋಂಡಾ, 1 ರಾಯಲ್ ಎನ್ ಫೀಲ್ಡ್, 1 ಕಾರು ಮತ್ತು ಕರಿಮಣಿ ಸರ ಸೇರಿ ಒಟ್ಟು 7.63 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರ ಪೈಕಿ ಮೂವರನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದು, ಇಬ್ಬರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು ಗ್ರಾಮದ ಕೊಲ್ನಾಡು ಚಂದ್ರಮೌಳೇಶ್ವರ ದೇವಸ್ಥಾನ ರಸ್ತೆಯ ಶ್ರೀನಿಧಿ ಮನೆಯಲ್ಲಿ ವಾಸವಾಗಿದ್ದ ವಸಂತಿ ಶೆಟ್ಟಿ ಅವರ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಅಪರಿಚಿತ 4 ಮಂದಿ 2023ರ ಸೆ.17ರಂದು ದರೋಡೆ ಮಾಡಿರುವ ಕುರಿತು ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಅದೇ ದಿನ ಚಂದ್ರಮೌಳೇಶ್ವರ ದೇವಸ್ಥಾನದ ರಸ್ತೆಯ ಬಳಿ ನಿಲ್ಲಿಸಿದ್ದ ಬೈಕ್ ಕಳವು ಗೈದಿರುವ ಬಗ್ಗೆ ಸೂರ್ಯ ಪ್ರಕಾಶ್ ಎಂಬವರು ದೂರು ನೀಡಿದ್ದರು.
ಕಾರ್ಯಾಚರಣೆಗೆ ಇಳಿದ ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ ಮಾರುತಿ ಅವರ ತಂಡ, ಉಡುಪಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿನ ಪುನರೂರು ಎಂಬಲ್ಲಿ ಚೆಕ್ ಪೋಸ್ಟ್ ಬಳಿ ಸಿಬ್ಬಂದಿ ಜೊತೆ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ವಸಂತಿ ಶೆಟ್ಟಿಯವರ ಕರಿಮಣಿ ಸರ ದರೋಡೆಗೈಯ್ಯಲು ಬಳಸಿದ್ದ ಬೈಕನ್ನು ವಶಕ್ಕೆ ಪಡೆದು ಆರೋಪಿಯನ್ನು ನ್ಯಾಯಾಲಕ್ಕೆ ಹಾಜರುಪಡಿಸಿದ್ದರು.
ಈ ಪ್ರಕರಣದ ಉಳಿದ ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿಸಿದಾಗ ಮುಲ್ಕಿ ಪೊಲೀಸ್ ನಿರೀಕ್ಷಕ ವಿದ್ಯಾದರ ಅವರು ಅಕ್ಟೋಬರ್ 3ರಂದು ಪುನರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸನೆಯಲ್ಲಿ ತೊಡಗಿದ್ದಾಗ ಸಂಶಯಾಸ್ಪದ ರೀತಿಯಲ್ಲಿ ಬಂದಿದ್ದ ಒಂದು ಬೈಕ್ ಮತ್ತು ಕಾರನ್ನು ವಶಕ್ಕೆ ಪಡೆದು ಅದರಲಿದ್ದವರನ್ನು ವಿಚಾರಣೆಗೆ ಒಳಪಡಿಸಿದಾಗ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ 4 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿದ್ಯಾಧರ ಡಿ ಬಾಯ್ಕರಿಕರ್, ಪಿ.ಎಸ್.ಐಗಳಾದ ವಿನಾಯಕ ಬಾವಿಕಟ್ಟಿ, ಮಾರುತಿ ಪಿ., ಎ.ಎಸ್.ಐ.ಗಳಾದ ಸಂಜೀವ, ಉಮೇಶ್, ಸುರೇಶ್ ಕುಂದರ್ ಎಚ್.ಸಿ.ಗಳಾದ ಕಿಶೋರ್ ಕುಮಾರ್, ಶಶಿಧರ, ಮಹೇಶ್, ಪ್ರಮೋದ್, ಚಂದ್ರಶೇಖರ್, ವಿಶ್ವನಾಥ, ಉದಯ್, ಜಯರಾಮ್, ಸತೀಶ್, ಪವನ್ ಮತ್ತು ಪಿ.ಸಿ.ಗಳಾದ ಅರುಣ್ ಕುಮಾರ್, ವಾಸುದೇವ, ವಿನಾಯಕ, ಶಂಕರ, ಚಿತ್ರಾ, ಚೆಲುವರಾಜ್, ಶೇಖರ, ಯಶವಂತ್, ಬಸವರಾಜ್, ಸುರೇಂದ್ರ, ಅಂಜಿನಪ್ಪ, ಇಮಾಮ್, ಶರಣಪ್ಪ ಭಾಗವಹಿಸಿದ್ದರು.