ಬೆಂಗಳೂರಿನ ಏರ್‌ಪೋರ್ಟ್‌ನಲ್ಲಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ; 8 ಬಗೆಯ ಅಪರೂಪದ ಪ್ರಾಣಿಗಳೂ ವಶಕ್ಕೆ

Share with

ದೇವನಹಳ್ಳಿ, ನವೆಂಬರ್ 18: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ (Kempegowda Airport) ಬರೋಬ್ಬರಿ 14 ಕೋಟಿ ರೂ ಮೌಲ್ಯದ  ಮಾದಕ ವಸ್ತು ಜಪ್ತು ಮಾಡಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಕಳೆದ 18 ದಿನಗಳಿಂದ ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಗಾಂಜಾ ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರು ಅಂದರ್
ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಕಳೆದ 18 ದಿನಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಸುಮಾರು 14.22 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ, ಇ-ಸಿಗರೇಟ್ ವಶಪಡಿಸಿಕೊಂಡಿದಾರೆ. ಪ್ರತ್ಯೇಕ ಪ್ರಕರಣಗಳಲ್ಲಿ ವಿದೇಶಗಳಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ 10 ಮಂದಿ ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದೆ.

ಅಧಿಕಾರಿಗಳ ಮಾಹಿತಿಯಂತೆ, ಬ್ಯಾಂಕಾಕ್ ಸೇರಿದಂತೆ ವಿದೇಶದ ಹಲವು ನಗರಗಳಿಂದ ಬಂದ ಪ್ರಯಾಣಿಕರು ತಮ್ಮ ಬ್ಯಾಗ್‌ಗಳಲ್ಲಿ 38.64 ಕೆ.ಜಿ ಹೈಡ್ರೋಪೋನಿಕ್ಸ್ ಗಾಂಜಾ, 2.38 ಲಕ್ಷ ರೂ. ಮೌಲ್ಯದ ವಿದೇಶಿ ಇ-ಸಿಗರೇಟ್‌ಗಳು ಹಾಗೂ ಎಂಟು ಬಗೆಯ ಅಪರೂಪದ ಜೀವಂತ ಪ್ರಾಣಿಗಳನ್ನು ಸಾಗಿಸುತ್ತಿದ್ದರೆಂದು ಗೊತ್ತಾಗಿದೆ. ಏರ್ಪೋರ್ಟ್ನ ಪ್ರಯಾಣಿಕರ ಚೆಕಿಂಗ್ ಸಂದರ್ಭದಲ್ಲಿ ಸಂಶಯಾಸ್ಪದ ಬ್ಯಾಗ್‌ಗಳನ್ನು ಸ್ಕ್ಯಾನಿಂಗ್ ಮಾಡಿದಾಗ ಈ ಅಕ್ರಮ ವಸ್ತುಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಕಸ್ಟಮ್ಸ್ ಅಧಿಕಾರಿಗಳು ಕಸ್ಟಮ್ಸ್ ಆಕ್ಟ್ ಮತ್ತು ಸಂಬಂಧಿತ ಕಾನೂನುಗಳಡಿ ಪ್ರಕರಣ ದಾಖಲಿಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *