ಸದನದಲ್ಲಿ ಡಿಕೆಶಿಯಿಂದ RSS ಗೀತೆ..! ಅಚ್ಚರಿಗೊಂಡ ನಾಯಕರು..!! ಈ ಬಗ್ಗೆ ಡಿಕೆಶಿ ಹೇಳಿದ್ದೇನು?

Share with

ಬೆಂಗಳೂರು: “ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ; ನನ್ನ ರಕ್ತ, ನನ್ನ ಜೀವನ, ಎಲ್ಲವೂ ಇಲ್ಲೇ ಇದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಸಂಸ್ಥೆಗಳನ್ನು ಹೇಗೆ ನಿರ್ಮಿಸುತ್ತಿದೆ, ಶಾಲೆಗಳನ್ನು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ನನಗೆ ತಿಳಿದಿದೆ. ನಾನು ಕಾಂಗ್ರೆಸ್ಸಿಗ ಮತ್ತು ನನ್ನ ಶಕ್ತಿಗಳನ್ನೆಲ್ಲಾ ಒಟ್ಟುಗೂಡಿಸಿ ಮುಂದಿನ ದಿನಗಳಲ್ಲಿ ಕೂಡ ಕಾಂಗ್ರೆಸ್ ನ್ನು ಮುನ್ನಡೆಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, 11 ಜನರ ಸಾವಿಗೆ ಕಾರಣವಾದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದ ಕುರಿತು ನಿನ್ನೆ ವಿಧಾನಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಗೀತೆಯನ್ನು ಹಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.

‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಎಂಬ ಆರ್‌ಎಸ್‌ಎಸ್ ಗೀತೆಯ ಮೊದಲ ಕೆಲವು ಸಾಲುಗಳನ್ನು ಕೇಳಿದ ಸದನದಲ್ಲಿ ನಾಯಕರು ಒಂದು ಕ್ಷಣ ಅಚ್ಚರಿಯಾದರು.

ಬಿಜೆಪಿ ಶಾಸಕರು ಶಿವಕುಮಾರ್ ಅವರನ್ನು ಕಾಲ್ತುಳಿತದ ‘ಪ್ರೋತ್ಸಾಹಕ’ ಎಂದು ಆರೋಪಿಸಿ ಸಾಮೂಹಿಕ ಕೋಲಾಹಲವನ್ನು ಸೃಷ್ಟಿಸಿದಾಗ ಶಿವಕುಮಾರ್ ಆರ್ ಎಸ್ ಎಸ್ ಕವಿತೆ ವಾಚಿಸಿದರು.

ಇದನ್ನು ಕೇಳಿ ಬಿಜೆಪಿ ನಾಯಕರು ಸೇರಿದಂತೆ ಹಲವರು ಡಿ ಕೆ ಶಿವಕುಮಾರ್ ಆರ್ ಎಸ್ ಎಸ್ ನತ್ತ ವಾಲುತ್ತಿದ್ದಾರೆ, ಬಿಜೆಪಿ ಸೇರುತ್ತಾರೆಯೇ ಎಂದು ಕಿಚಾಯಿಸಿದರು. ಡಿ ಕೆ ಶಿವಕುಮಾರ್ ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ನಾನು ರಾಜಕೀಯ ಪಕ್ಷಗಳ ಬಗ್ಗೆ ಸಂಶೋಧನೆ ಮಾಡಿದ್ದೇನೆ. ಆರ್ ಎಸ್ ಎಸ್ ಸಂಸ್ಥೆಗಳನ್ನು ಹೇಗೆ ಕರ್ನಾಟಕದಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ನನಗೆ ಗೊತ್ತಿದೆ. ಅವರು ಶಾಲೆಗಳನ್ನು ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಖರೀದಿಸಿ ತಮ್ಮ ತತ್ವ, ನೀತಿಗಳನ್ನು ಮಕ್ಕಳಿಗೆ ಬೋಧಿಸಲು ಪ್ರಯತ್ನಿಸುತ್ತಿದ್ದಾರೆ. ಒಬ್ಬ ರಾಜಕೀಯ ನಾಯಕನಾಗಿ ನನಗೆ ಇವೆಲ್ಲ ಗೊತ್ತಿರಬೇಕು, ತಿಳಿದುಕೊಳ್ಳುತ್ತೇನೆ.

ರಾಜಕೀಯವಾಗಿ ನಾವು ಬಿಜೆಪಿ, ಆರ್ ಎಸ್ ಎಸ್ ಜೊತೆ ಭಿನ್ನಾಭಿಪ್ರಾಯ ಹೊಂದಿರಬಹುದು. ಆರ್ ಎಸ್ ಎಸ್ ಪ್ರಾರ್ಥನೆ ಹೇಳಿದ ತಕ್ಷಣ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎಂದರ್ಥವಲ್ಲ. ನಾನು ಕಾಂಗ್ರೆಸ್ ನ್ನು ಮುನ್ನಡೆಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದರು.


Share with

Leave a Reply

Your email address will not be published. Required fields are marked *