ನವದೆಹಲಿ: ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 2023ರ ಏಕದಿನ ವಿಶ್ವಕಪ್‌ನ ಜಾಗತಿಕ ರಾಯಭಾರಿಯಾಗಿ ನೇಮಕ ಮಾಡಿದೆ. ವಿಶ್ವ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರಲ್ಲಿ ಅಗ್ರಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ ಅನೇಕ ದಾಖಲೆಗಳನ್ನು ಹೊಂದಿದ್ದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದ ವೇಳೆ ಸಚಿನ್ ವಿಶ್ವಕಪ್ ಟ್ರೋಫಿಯನ್ನು ಮೈದಾನಕ್ಕೆ ತರಲಿದ್ದಾರೆ. ಹಾಗೆಯೇ ವಿಶ್ವಕಪ್ಗೆ ಚಾಲನೆಯನ್ನೂ ನೀಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿನ್ ತೆಂಡೂಲ್ಕರ್, “1987ರ ವಿಶ್ವಕಪ್ ನಲ್ಲಿ ಬಾಲ್ ಬಾಯ್ ಆಗಿದ್ದ ನಾನು, ದೇಶವನ್ನು ಆರು ವಿಶ್ವಕಪ್ ಆವೃತ್ತಿಗಳಲ್ಲಿ ಪ್ರತಿನಿಧಿಸಿರುವುದರಿಂದ, ವಿಶ್ವಕಪ್ ಗಳಿಗೆ ನನ್ನ ಹೃದಯದಲ್ಲಿ ಎಂದಿಗೂ ವಿಶೇಷ ಸ್ಥಾನವಿದೆ. 2011ರಲ್ಲಿ ವಿಶ್ವಕಪ್ ಜಯಿಸಿದ್ದು ನನ್ನ ಕ್ರಿಕೆಟ್ ಪಯಣದಲ್ಲಿನ ಅತ್ಯಂತ ಹೆಮ್ಮೆಯ ಕ್ಷಣವಾಗಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.