ಮಂಗಳೂರು: ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಅವರು ಜಿಲ್ಲೆಗೆ ಮೊದಲ ಬಾರಿ ಆಗಮಿಸಿದ್ದಾರೆ. ಸಹಕಾರಿ ಇಲಾಖೆಯ ಆಳ ಅಗಲವನ್ನು ಬಲ್ಲ ಇವರು ಸಚಿವರಾಗಿರುವುದು ನಮ್ಮೆಲ್ಲರ ಪುಣ್ಯ” ಎಂದು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಳಿಕ ಮಾತಾಡಿದ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು, “ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ತತ್ವಗಳ ಸರಿಯಾದ ಪಾಲನೆಯಾಗುತ್ತಿದೆ. ಸಹಕಾರಿ ಆಂದೋಲನದ ಬೇಡಿಕೆ ಈಡೇರಿಸುವುದು ನಮ್ಮ ಮುಖ್ಯ ಜವಾಬ್ದಾರಿಯಾಗಿದೆ. ಇದಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ರೈತರಿಗೆ ಸಾಲ ನೀಡಿಕೆಯಲ್ಲಿ ಬ್ಯಾಂಕ್ ಗಳಿಗೆ ಹೆಚ್ಚಿನ ಲಾಭ ಇರದಿದ್ದರೂ ವ್ಯವಸಾಯೇತರ ಸಾಲ ನೀಡಿಕೆಯಲ್ಲಿ ಅದನ್ನು ಸರಿದೂಗಿಸುವ ಕೆಲಸವನ್ನು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಾಡುತ್ತಿದೆ. ಈ ಮೂಲಕ ಇತರ ಬ್ಯಾಂಕ್ ಗಳಿಗೆ ಮಾದರಿಯಾಗಿದೆ. ಬ್ಯಾಂಕ್ ಅಧ್ಯಕ್ಷರಿಂದ ಹಿಡಿದು ಸಿಬ್ಬಂದಿಯವರೆಗೆ ಎಲ್ಲರೂ ಗ್ರಾಹಕರ ಹಿತಚಿಂತನೆಯನ್ನು ಕಾಯುತ್ತಿರುವುದು ಖುಷಿಯ ವಿಚಾರ”ಎಂದರು. “ನಮ್ಮೆಲ್ಲರ ಸಹಕಾರಿಗಳ ಉದ್ದೇಶ ಏನೆಂದರೆ ಸಹಕಾರಿ ಆಂದೋಲನದಿಂದ ಪ್ರಯೋಜನ ಪಡೆದು ಹಳ್ಳಿಗಾಡುಗಳ ಜನರು ಕೂಡ ಮುಂದೆ ಬರಬೇಕು. ಬ್ಯಾಂಕ್ ಸೇವೆಗಳನ್ನು ಪಡೆಯಬೇಕು. ಇದು ಜನರ ಆಂದೋಲನವಾಗಿದ್ದು ಯುವಕರು ಮಹಿಳೆಯರು ಭಾಗಿಯಾಗಬೇಕು ಎನ್ನುವ ಆಶಯ ನಮ್ಮದು” ಎಂದರು.