ಶ್ರಾವಣ ಮಾಸದಲ್ಲಿ ಹೆಚ್ಚಿನ ಜನರು ಮಾಂಸಾಹಾರದಿಂದ ದೂರವಿರುತ್ತಾರೆ. ಈ ಸಂಪ್ರದಾಯದ ಹಿಂದೆ, ಧಾರ್ಮಿಕ ಮಾತ್ರವಲ್ಲ, ವೈಜ್ಞಾನಿಕ ಕಾರಣಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ನಿಜ. ಹಾಗಾದರೆ ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮುಖ್ಯವಾಗಿ ಮಳೆಗಾಲ ಜಲಚರಗಳಿಗೆ ಸಂತಾನೋತ್ಪತ್ತಿಯ ಸಂದರ್ಭವಾಗಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಮನುಷ್ಯರು ಮೀನು ಹಿಡಿದು ತಿನ್ನುತ್ತಿದ್ದರೆ ಆಗ ಜಲಚರಗಳ ಸಂತಾನೋತ್ಪತ್ತಿ ಕ್ರಿಯೆಗೆ ಅಡ್ಡಿಪಡಿಸಿದಂತಾಗುತ್ತದೆ. ಅಷ್ಟೇ ಅಲ್ಲ ಮೀನುಗಳ ಸಂಖ್ಯೆ ಕಡಿಮೆಯಾಗಿ ಅದರಿಂದ ಸೃಷ್ಟಿಯ ಲಯ ತಪ್ಪುತ್ತದೆ. ಆದ್ದರಿಂದ ಈ ಸಮಯದಲ್ಲಿ ಮೀನುಗಳು ಸೇರಿದಂತೆ ಬಹುತೇಕ ಮಾಂಸಾಹಾರವನ್ನು ತಿನ್ನುವುದಿಲ್ಲ.
ಇನ್ನು ಮಳೆಗಾಲದಲ್ಲಿ ನೀರು ಹೆಚ್ಚು ಕಲುಷಿತವಾಗಿರುವ ಸಂಭವವಿದೆ. ಆ ನೀರಿನಲ್ಲೇ ವಾಸಿಸುವ ಮೀನುಗಳು ಅಥವಾ ಕಲುಷಿತ ನೀರಿಗೆ ಅವಲಂಬಿತವಾಗಿರುವ ಅನೇಕ ಪ್ರಾಣಿಗಳಿಗೆ ನೀರಿನಿಂದ ಬರುವ ನಾನಾ ಖಾಯಿಲೆಗಳು ಬಂದಿರಬಹುದು. ಆದ್ದರಿಂದ ರಕ್ಷಣೆಗೆ ಸಸ್ಯಾಹಾರ ಸೂಕ್ತ ಎಂದು ಹಿರಿಯರು ಹೇಳಿದ್ದಾರೆ.
ಮತ್ತೊಂದು ಪ್ರಮುಖ ಕಾರಣವೆಂದರೆ, ಶ್ರಾವಣ ಮಾಸದಲ್ಲಿ ಮಳೆಗಾಲ ಮುಗಿದಿರುವುದಿಲ್ಲ ಹಾಗಾಗಿ ಬಿಸಿಲಿನ ಅಭಾವ ಇರುತ್ತದೆ. ಹೆಚ್ಚು ಬೆಳಕಿರುವುದಿಲ್ಲ. ಹೀಗಾಗಿ ನಮ್ಮ ದೇಹದ ಜೀರ್ಣಕ್ರಿಯೆ ಕೂಡ ಹೆಚ್ಚು ಚುರುಕಾಗಿ ಇರುವುದಿಲ್ಲ. ಇದರಿಂದ ಮಾಂಸಾಹಾರದಂತಹ ಕಠಿಣ ಪದಾರ್ಥವನ್ನು ದೇಹ ಸರಿಯಾಗಿ ಜೀರ್ಣಿಸುವುದು ಕಷ್ಟ. ಆದ್ದರಿಂದ ಈ ಮಾಸದಲ್ಲಿ ಸಸ್ಯಾಹಾರ ಸೇವಿಸುವುದು ಉತ್ತಮ ಎನ್ನುವ ಲೆಕ್ಕಾಚಾರವಿದೆ.
ಒಟ್ಟಾರೆಯಾಗಿ ತಲತಲಾಂತರದಿಂದ ಬಂದಿರುವ ಈ ಆಚರಣೆ ಮುನುಷ್ಯನ ದೇಹ ಮತ್ತು ಆರೋಗ್ಯಕ್ಕೂ, ಪ್ರಾಣಿ ಮತ್ತು ಪ್ರಕೃತಿಯ ಒಳಿತಿಗೂ ಉತ್ತಮವಾದ ದೃಷ್ಟಿ ಇಟ್ಟುಕೊಂಡೆ ಮಾಡಲಾಗಿದೆ. ಹಾಗಾಗಿ ಇದನ್ನು ಸಾಧ್ಯವಾದರೆ ಪಾಲನೆ ಮಾಡುವುದು ಎಲ್ಲರಿಗೂ ಒಳಿತು.