ಉಡುಪಿ: ಪಾಕ್ ಜಿಂದಾಬಾದ್ ಘೋಷಣೆ ಹಾಕಿಲ್ಲ. ಈ ಬಗ್ಗೆ ಎಸ್ ಡಿಪಿಐಗೆ ಕ್ಲಾರಿಟಿ ಇದೆ. ಇದು ಬಿಜೆಪಿ ಫೇಕ್ ಫ್ಯಾಕ್ಟರಿಯಲ್ಲಿ ತಯಾರಾದ ವಿಡಿಯೋ. ಸಾವರ್ಕರ್, ಗೋಡ್ಸೆಪರ ಇರುವವರು ಈ ವಿಡಿಯೋ ಕ್ರಿಯೇಟ್ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಧಮ್ ಇದ್ದರೆ ಫೇಕ್ ಸುದ್ದಿ ಹರಡಿದವರನ್ನು ಬಂಧಿಸಲಿ ಎಂದು ಎಸ್ ಡಿಪಿಐ ನಾಯಕ ರಿಯಾಜ್ ಕಡಂಬು ಸವಾಲು ಹಾಕಿದರು.
ಪಾಕ್ ಪರ ಘೋಷಣೆ ಕೂಗಿದ ಮೂವರ ಬಂಧನ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಮಾ.6ರಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಜನ ಅಮಾಯಕರನ್ನು ಬಂಧನ ಮಾಡಿದ್ದಾರೆ. ಇದೆಲ್ಲ ಬೋಗಸಾಗಿ ನಡೆದ ಬಂಧನ ಪ್ರಕರಣ. ಈ ದೇಶದ ಮುಸಲ್ಮಾನರಿಗೆ ಪಾಕ್ ಪರ ಘೋಷಣೆ ಕೂಗುವ ಗತಿಗೇಡು ಬಂದಿಲ್ಲ ಎಂದು ಕಿಡಿಕಾರಿದರು.
ಎಫ್ಎಸ್ಎಲ್ ವರದಿಯಲ್ಲಿ ಎಸ್ ಡಿಪಿಐಗೆ ನಂಬಿಕೆ ಇಲ್ಲ. ಬಂಧನ ಮಾಡಿರುವ ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ನಲ್ಲಿರುವ ಮುಸ್ಲಿಮ್ ಮುಖಂಡರು ಹಾಗೂ ಕಾರ್ಯಕರ್ತರು ಅಗತ್ಯ ಬಿದ್ದಾಗ ನಿಮ್ಮ ಜೊತೆ ನಿಲ್ಲಲು ಲಾಯಕ್ ಇಲ್ಲದಿರುವ ಪಕ್ಷದಲ್ಲಿ ಮುಂದುವರಿಯುವುದು ಎಷ್ಟು ಸರಿ ಎಂದು ಯೋಚನೆ ಮಾಡಬೇಕು ಎಂದರು.