ಅಧಿವೇಶನ; ಕಾಪು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಶಾಸಕ ಗುರ್ಮೆ ಸುರೇಶ್

Share with

ಬೆಳಗಾವಿ/ಕಾಪು: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದ್ದು, 1 ಜಿಲ್ಲೆ 1 ತಾಣ ಅಭಿವೃದ್ಧಿಯಡಿ ಕಾಪು ಕ್ಷೇತ್ರದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಬೇಕು ಎಂದು ಶಾಸಕ ಗುರ್ಮೆ ಶೆಟ್ಟಿ ಬೆಳಗಾವಿ ಸುವರ್ಣ ಸೌಧ’ದಲ್ಲಿ ನಡೆಯುತ್ತಿರುವ ಅಧಿವೇಶನದ ಸಂದರ್ಭಸದನದಲ್ಲಿ ಸರಕಾರಕ್ಕೆ ಮನವಿ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆ ಅಧಿವೇಶನದ ಚುಕ್ಕೆ ಗುರುತಿನ ಸಂಖ್ಯೆ 380 ರಡಿ ಈ ಕುರಿತು ರಾಜ್ಯ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಶಾಸನ ರಚನಾ ಶಾಸ್ತ್ರ ಇಲಾಖೆಯ ಸಚಿವ ಹೆಚ್.ಕೆ.ಪಾಟೀಲ್ ಅವರಿಗೆ ಮನವಿ ಮಾಡುತ್ತಾ ನಾನು ಸತತ 3 ನೇ ಬಾರಿಗೆ ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ಕಾಪು ಕ್ಷೇತ್ರದಲ್ಲಿ ಮಾರಿಗುಡಿ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ ಮತ್ತು ಅಂತರಾಷ್ಟ್ರೀಯ ಮನ್ನಣೆ ಪಡೆದ ಲೈಟ್ ಹೌಸ್, ಬ್ಲೂ ಫ್ಲಾಗ್ ಬೀಚ್ ಸಹಿತ ಹಲವಾರು ಧಾರ್ಮಿಕ ಮತ್ತು ಪ್ರವಾಸೋದ್ಯಮ ಸ್ಥಳಗಳಿವೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. 1 ಜಿಲ್ಲೆ 1 ತಾಣ ಯೋಜನೆಯಡಿ ಕಾಪು ಕ್ಷೇತ್ರವನ್ನು ನಿಗದಿಗೊಳಿಸಿ, ಪ್ರವಾಸಿ ತಾಣದ ಅಭಿವೃದ್ಧಿಗೆ 5 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಪ್ರಥಮ ಅಧಿವೇಶನದಲ್ಲೇ ಭರವಸೆ ನೀಡಿದ್ದೀರಿ. ಇದುವರೆಗೂ ಹಣ ಬಿಡುಗಡೆ ಆಗಿಲ್ಲ. ಹಣ ಬಿಡುಗಡೆ ಮಾಡಿದರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅನುಕೂಲವಾಗುತ್ತದೆ. ಈ ಕುರಿತು ಕೇಂದ್ರ ಸರಕಾರಕ್ಕೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ.ಪಾಟೀಲ್ ಅವರು, ಕಾಪು ಪ್ರವಾಸಿ ತಾಣವೆಂದು ಘೋಷಣೆ ಮಾಡಿದ್ದೇವೆ. 75 ಲಕ್ಷ ರೂ. ವೆಚ್ಚದಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳ ಸಂಪರ್ಕ ಸೇತುವೆ ಕಾಮಗಾರಿ ಪೂರ್ಣಗೊಳಿಸಿದ್ದೇವೆ. ನಿಮ್ಮ ಬೇಡಿಕೆಯಂತೆ ಲೈಟ್ ಹೌಸ್ ಬೀಚ್ ಅಭಿವೃದ್ಧಿ ಬಗ್ಗೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡುವ ಘೋಷಣೆ ಮಾಡಿದ್ದೆವು. ಈ ಕಾಮಗಾರಿಗೆ ಅನುಮೋದನೆ ನೀಡಿ, ಕರ್ನಾಟಕ ಪ್ರವಾಸೋದ್ಯಮ ಮೂಲಸೌಕರ್ಯ ನಿಗಮಕ್ಕೆ ವಹಿಸಿದ್ದೇವೆ. ಖಂಡಿತವಾಗಿಯೂ ಮುಂದಿನ ಆರ್ಥಿಕ ವರ್ಷದೊಳಗೆ ಅನುದಾನ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದರು.


Share with

Leave a Reply

Your email address will not be published. Required fields are marked *