ತಿರುವನಂತಪುರ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್ಕೂಟಥಿಲ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಮಹಿಳೆಯೊಬ್ಬರ ಹೇಳಿಕೆ ಆಧಾರದ ಮೇಲೆ ಶುಕ್ರವಾರ ವಲಿಯಮಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿ ಮಾಡಿದ್ದ ದೂರುದಾರೆ ರಾಹುಲ್ ಮಮ್ಕೂತಥಿಲ್ ವಿರುದ್ಧ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ಸಿಎಂ ಭೇಟಿ ಬಳಿಕ ಠಾಣೆಗೆ ಆಗಮಿಸಿದ ಮಹಿಳೆ ಪೊಲೀಸರಿಗೆ ವಿವರವಾಗಿ ಹೇಳಿಕೆ ನೀಡಿ ದೂರು ದಾಖಲಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಬಲವಂತದ ಗರ್ಭಪಾತ ಮತ್ತು ಜೀವ ಬೆದರಿಕೆ ಸಂಬಂಧವಾಗಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಮಹಿಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಂಪರ್ಕಿಸಿದ ನಂತರ ಮಮ್ಕೂಟತಿಲ್ ತಲೆಮರೆಸಿಕೊಂಡಿರುವುದಾಗಿ ವರದಿಯಾಗಿದೆ. ಸದ್ಯ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಪಾಲಕ್ಕಾಡ್ನ ಕಾಂಗ್ರೆಸ್ ನಾಯಕರು ಮತ್ತು ಮಮ್ಕೂಟತಿಲ್ ಗುರುವಾರ ಸಂಜೆ ಸುಮಾರು 4 ಗಂಟೆಯವರೆಗೆ ಕನಾಡಿ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಸಕ್ರಿಯವಾಗಿ ಪ್ರಚಾರ ಮಾಡುತ್ತಿದ್ದರು. ಅದಾದ ಬಳಿಕ ನಾಪತ್ತೆಯಾಗಿದ್ದಾರೆ.




