ಬೆಂಗಳೂರು: ಪತಿ ಮಾರಾಟ ಮಾಡಿದ್ದ ಶಾಲೆಯನ್ನು ಮರಳಿ ಕೊಡಿಸುವ ಭರವಸೆ ನೀಡಿ ಮಹಿಳೆಗೆ 16 ಲಕ್ಷ ರೂ. ವಂಚಿಸಿ, ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಡಿ ಸ್ವಯಂಸೇವಾ ಸಂಸ್ಥೆಯೊಂದರ (ಎನ್‌ಜಿಒ) ಕಾರ್ಯನಿರ್ವಹಣಾಧಿಕಾರಿಯನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್ ನಿವಾಸಿ 43 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ಆರೋಪಿ ಮೊಹಮ್ಮದ್ ಹನೀಫ್ ಎಂಬಾತನನ್ನು ಬಂಧಿಸಿದ್ದಾರೆ. ವಂಚನೆಯಾದ ಬಗ್ಗೆ ಮಹಿಳೆಯು ಬ್ಯಾಟರಾಯಪುರ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ಡಿಸಿಆರ್‌ಇಗೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸಿ ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯು ತಮ್ಮ ಪತಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ದಂಪತಿ ಜೊತೆಗಿದ್ದಾಗ ನಗರದಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರು. ನಂತರ ತನ್ನ ಪತ್ನಿಗೆ ತಿಳಿಯದಂತೆ ಪತಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯನ್ನ ಬೇರೆಯವರಿಗೆ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ. ಈ ಸಂಗತಿ ತಿಳಿಯುತ್ತಿದ್ದಂತೆ ಪತ್ನಿ ಈ ಬಗ್ಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಪರಿಚಿತರ ಮೂಲಕ ದೂರುದಾರೆಗೆ ಆರೋಪಿ ಹನೀಫ್ ಪರಿಚಯವಾಗಿತ್ತು.
ಸ್ವಯಂಸೇವಾ ಸಂಸ್ಥೆಯೊಂದರ (ಎನ್‌ಜಿಓ) ಸಿಇಒ ಎಂದು ಹನೀಫ್ ಬಿಂಬಿಸಿಕೊಂಡಿದ್ದ. ತಮ್ಮ ಸಂಸ್ಥೆಯ ಮೂಲಕ ವಿವಾದವಿರುವ ಪ್ರಕರಣಗಳನ್ನು ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಮಾತನಾಡಿ ಇತ್ಯರ್ಥಪಡಿಸುವ ಭರವಸೆ ನೀಡಿದ್ದ. ಶಾಲೆ ವಾಪಸ್ ಕೊಡಿಸುವ ಬಗ್ಗೆ ಪ್ರಸ್ತಾಪಿಸಿದಾಗ ಆರೋಪಿಯು ನನಗೆ ಗೊತ್ತಿರುವ ಕೇರಳ ಮೂಲದ ಗುರುಗಳ ಪರಿಚಯವಿದೆ. ಅವರಿಂದ ಕೆಲವು ಪೂಜೆಗಳನ್ನ ಮಾಡಿಸಿದರೆ ಒಳ್ಳೆಯದಾಗಲಿದೆ ಎಂದು ಹೇಳಿದ್ದ. ಅದರಂತೆ ಜ್ಯೋತಿಷಿ ಅವರ ಮನೆಗೆ ಮಹಿಳೆ ಆಗಾಗ ಹೋಗುತ್ತಿದ್ದರು. ಪ್ರತಿ ಬಾರಿ ಮನೆಗೆ ಹೋದಾಗ ಚಹಾದಲ್ಲಿ ಮದ್ದು ಬೆರೆಸಿ ಕೊಡುತ್ತಿದ್ದ. ಬಳಿಕ ಲೈಂಗಿಕವಾಗಿ ಮಾತನಾಡಿ ಅಸಭ್ಯವಾಗಿ ವರ್ತಿಸುತ್ತಿದ್ದ. ಜೊತೆಗೆ ಮೊಹಮದ ಹನೀಫ್ 7 ಲಕ್ಷ ರೂಪಾಯಿ ಪಡೆದುಕೊಂಡು ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ನೀಡಿರುವ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತಾಂತರ ಆಗುವಂತೆ ಮಹಿಳೆಗೆ ಒತ್ತಾಯ: ದೂರು ಮಹಿಳೆ ಹಾಗೂ ದೂರುದಾರ ಇಬ್ಬರೂ ಎರಡು ವರ್ಷಗಳಿಂದ ಪರಿಚಿತರಾಗಿದ್ದರು. ನಾಯಂಡಹಳ್ಳಿಯಲ್ಲಿ ಆರೋಪಿಯ ಕಚೇರಿ ಇತ್ತು. ಅಲ್ಲಿಗೆ ಹೋದಾಗ ಆರೋಪಿ ನನ್ನ ಇಚ್ಚೆಗೆ ವಿರುದ್ಧವಾಗಿ ಮೈ ಮುಟ್ಟಿ ಕಿರುಕುಳ ನೀಡಿದ್ದ. ಪ್ರಶ್ನಿಸಿದರೆ, ನನ್ನನ್ನು ಮದುವೆಯಾಗು ಎಲ್ಲವೂ ಸರಿಯಾಗಲಿದೆ. ವಿವಾಹ ಬಳಿಕ ಮತಾಂತರವಾಗು ಎಂದು ಒತ್ತಾಯಿಸಿದ್ದ. ಒಟ್ಟಾರೆ 16 ಲಕ್ಷ ರೂ. ನೀಡಿದರೂ ಶಾಲೆ ಮರಳಿಸಿ ಕೊಡಿಸದೇ ವಂಚಿಸಿದ್ದ. ಆತನ ಮನೆಗೆ ಹೋಗಿ ಹಣ ನೀಡಿರುವ ಕುರಿತು ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ಬೆದರಿಸಿ ಜಾತಿ ನಿಂದನೆ ಮಾಡಿರುವುದಾಗಿ ನೊಂದ ಮಹಿಳೆಯು ದೂರಿನಲ್ಲಿ ತಿಳಿಸಿದ್ದಾರೆ.




