ತಿರುವನಂತಪುರಂ: ಮುಂಬರುವ ‘ಕೇರಳ ಸ್ಟೋರಿ 2: ಗೋಸ್ ಬಿಯಾಂಡ್’ ಚಿತ್ರದ ವಿರುದ್ಧ ಆಡಳಿತಾರೂಢ ಸಿಪಿಐ(ಎಂ) ನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಗೋಮಾಂಸ ಉತ್ಸವ ಆಯೋಜಿಸಿ ಆಕ್ರೋಶಕ್ಕೆ ಗುರಿಯಾಗಿದೆ.

ಸಿಪಿಐ(ಎಂ)ನ ಯುವ ಘಟಕ ಡಿವೈಎಫ್‌ಐ ಮತ್ತು ವಿದ್ಯಾರ್ಥಿ ವಿಭಾಗ ಎಸ್‌ಎಫ್‌ಐ ಶುಕ್ರವಾರ ಸಂಜೆ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿವೆ. ತಿರುವನಂತಪುರದ ಮಾನವೀಯಂ ವೇದಿಕೆಯಲ್ಲಿ ನಡೆದ ಎಸ್‌ಎಫ್‌ಐ ನಡೆಸಿದ ಕಾರ್ಯಕ್ರಮದಲ್ಲಿ ಪರೋಟಾದೊಂದಿಗೆ ಗೋಮಾಂಸ ಬಡಿಸಿದ್ದು ವ್ಯಾಪಕ ಟೀಕೆಗೆ ಗುರಿಯಾಯಿತು. ‘ಕೇರಳ ಸ್ಟೋರಿ 2’ ಚಿತ್ರ ಫೆಬ್ರವರಿ 27 ರಂದು ಬಿಡುಗಡೆಯಾಗಲಿದೆ.
ಕಾಂಗ್ರೆಸ್ ಮಿತ್ರ ಪಕ್ಷ ಐಯುಎಂಎಲ್ ಭಾನುವಾರ ಟೀಕಿಸಿದ್ದು, ಇದು “ಪ್ರಚೋದನಕಾರಿ” ಪ್ರತಿಭಟನೆಯ ರೂಪ ಎಂದಿದೆ. ಐಯುಎಂಎಲ್ ನ ವಿದ್ಯಾರ್ಥಿ ವಿಭಾಗವಾದ ಎಂಎಸ್ಎಫ್ ‘ಕೇರಳ ಸ್ಟೋರಿ 2’ ಅನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ, ಆದರೆ ಚಿತ್ರ ವಿರೋಧಿಸಿ ಎಸ್‌ಎಫ್‌ಐ ಆಯೋಜಿಸುತ್ತಿರುವ ‘ಗೋಮಾಂಸ ಉತ್ಸವವನ್ನು ವಿರೋಧಿಸಿದೆ.
ಐಯುಎಂಎಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ. ಸಲಾಂ ಅವರು ಗೋಮಾಂಸ ಉತ್ಸವವು ಮುಸ್ಲಿಂ ಮತದಾರರನ್ನು ಓಲೈಸುವ ಗುರಿಯನ್ನು ಹೊಂದಿರುವ “ಅಗ್ಗದ ರಾಜಕೀಯ ಗಿಮಿಕ್” ಎಂದು ಆರೋಪಿಸಿದ್ದಾರೆ.
ಈ ರೀತಿ ಕಾರ್ಯಕ್ರಮವನ್ನು ನಡೆಸುವುದರಿಂದ ಆರ್‌ಎಸ್‌ಎಸ್ ಪರವಲ್ಲದ, ಆದರೆ ಧಾರ್ಮಿಕ ಅಥವಾ ವೈಯಕ್ತಿಕ ಕಾರಣಗಳಿಗಾಗಿ ಗೋಮಾಂಸ ತಿನ್ನದ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಬಹುದು ಎಂದು ಅನೇಕರು ಆಕ್ರೋಶ ಹೊರ ಹಾಕಿದ್ದಾರೆ.
‘ಕೇರಳ ಸ್ಟೋರಿ 2’ ಚಿತ್ರದಲ್ಲಿ ಹಿಂದೂ ಮಹಿಳೆಗೆ ಒತ್ತಾಯಪೂರ್ವಕವಾಗಿ ಗೋಮಾಂಸ ತಿನ್ನಿಸುವ ದೃಶ್ಯವಿದೆ ಎಂದು ಎಸ್‌ಎಫ್‌ಐ ಪ್ರತಿಭಟನೆ ನಡೆಸಿದೆ ಎಂದು ತಿಳಿದು ಬಂದಿದೆ.
ಎಸ್‌ಎಫ್‌ಐ ನಡೆಗೆ ಬಿಜೆಪಿ ವ್ಯಾಪಕ ಆಕ್ರೋಶ ಹೊರ ಹಾಕಿದ್ದು ಕೇರಳದಲ್ಲಿ ಅರಾಜಕತೆ ತಾಂಡವವಾಡುತ್ತಿದೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ.




