ಉಡುಪಿ: ಜಗದೀಶ್ ಶೆಟ್ಟರ್ ಮರು ಸೇರ್ಪಡೆಯಿಂದ ಮತ್ತಷ್ಟು ನಾಯಕರು ಬಿಜೆಪಿಗೆ ಮರಳುತ್ತಾರೆ. ಶೆಟ್ಟರ್ ಸುಧೀರ್ಘ ರಾಜಕೀಯ ಅನುಭವಿ ಮತ್ತು ಮುತ್ಸದ್ದಿ. ಜನಸಂಘ ಕಾಲದಿಂದ ಬಿಜೆಪಿ ಕಟ್ಟಿದವರು. ಅವರ ಮರು ಆಗಮನದಿಂದ ಖುಷಿ ,ಸಮಾಧಾನ, ಸಂತೋಷವಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿಯಲ್ಲಿ ಜ.25ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಬಿಜೆಪಿಗೆ ಮರಳುತ್ತಾರೆಂಬ ನಿರೀಕ್ಷೆ ಇತ್ತು. ನಮ್ಮ ಸಿದ್ದಾಂತದ ಜೊತೆ ಸುದೀರ್ಘಕಾಲ ಗುರುತಿಸಿಕೊಂಡಿದ್ದವರು. ಶೆಟ್ಟರ್ ರಂತಹ ಸೈದ್ಧಾಂತಿಕ ಹಿನ್ನೆಲೆಯವರಿಗೆ ಬೇರೆ ಪಕ್ಷ ಒಗ್ಗುವುದಿಲ್ಲ ಎಂದರು.
ಕಾಂಗ್ರೆಸ್ ಎಷ್ಟೇ ಅವಕಾಶಕೊಟ್ಟರೂ ಶೆಟ್ಟರ್ ರನ್ನು ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ಅಧಿಕಾರಕ್ಕಿಂತ ಹೆಚ್ಚಾಗಿ ನನಗೆ ಸಮಾಧಾನ ಬೇಕು ಎಂದು ಅವರು ಬಿಜೆಪಿಗೆ ಮರಳಿದ್ದಾರೆ. ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಸಣ್ಣಪುಟ್ಟ ಮುನಿಸಿದ್ದರೂ ಸಿದ್ಧಾಂತಕ್ಕೆ ಬದ್ಧತೆ ಇದೆ ಎಂಬುದಕ್ಕೆ ಶೆಟರ್ ಅವರೇ ಸಾಕ್ಷಿ ಎಂದರು.
ಲಕ್ಷ್ಮಣ್ ಸವದಿ ಕೂಡ ಬಿಜೆಪಿ ಮರು ಸೇರ್ಪಡೆ ಬಗ್ಗೆಯೂ ಚರ್ಚೆಯಾಗುತ್ತಿದೆ. ಸವದಿ ಕೂಡ ಶೆಟ್ಟರ್ ಹಾದಿ ತುಳಿಯುತ್ತಾರೆ ಎಂಬ ವಿಶ್ವಾಸವಿದೆ. ಸವದಿ ಬಿಜೆಪಿಗೆ ಬಂದರೆ ಸ್ವಾಗತ. ಮೋದಿ ನಾಯಕತ್ವವನ್ನು ರಾಷ್ಟ್ರವೇ ಪ್ರೀತಿಸುತ್ತಿದೆ. ರಾಮ ಪ್ರತಿಷ್ಠಾಪನೆ ನಂತರ ಕಾಂಗ್ರೆಸ್ ನಲ್ಲಿರುವ ಹಿಂದುಗಳು ಕೂಡ ಬಿಜೆಪಿಯ ವೈಚಾರಿಕತೆಯನ್ನು ಮೆಚ್ಚಿದ್ದಾರೆ. ರಾಷ್ಟ್ರವನ್ನು ಮುನ್ನಡೆಸುತ್ತಿರುವ ಮೋದಿಯವರನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಕ್ಷದ ಶಕ್ತಿ ವೃದ್ಧಿಯಾಗಿದೆ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು.