ಉಡುಪಿ: ಸಚಿವರ ರಾಜೀನಾಮೆ ಪಡೆಯಲಾಗದಷ್ಟು ಸಿದ್ದರಾಮಯ್ಯ ದುರ್ಬಲರಾಗಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಲೇವಡಿ ಮಾಡಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಹಗರಣ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಾವು ಸಿಬಿಐ ತನಿಖೆಗೆ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡಿದ್ದೇವೆ. ಆದರೆ ಎಸ್ಐಟಿ ನೇಮಕ ಮಾಡಿ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಟೀಕಿಸಿದರು.
ಮುಖ್ಯಮಂತ್ರಿಗಳು ನಾಗೇಂದ್ರರನ್ನು ಕರೆದು ರಾಜಿನಾಮೆ ಕೊಡಲು ಹೇಳಿದ್ದಾರಂತೆ.ನನ್ನ ರಾಜೀನಾಮೆ ಕೇಳಿದರೆ ಎಲ್ಲರ ವಿಚಾರ ಬಹಿರಂಗ ಮಾಡುತ್ತೇನೆ ಎಂದು ನಾಗೇಂದ್ರ ಬೆದರಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದಿಗ್ಧತೆಯಲ್ಲಿದ್ದಾರೆ. ಪರಿಶಿಷ್ಟ ಜಾತಿ ಪಂಗಡದವರ ಕೆಲಸ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಬಡವರ ಹಣ ಇವತ್ತು ಕಂಪನಿಗಳ ಖಾತೆಗೆ ಹೋಗಿದೆ. ತಕ್ಷಣ ಸಚಿವರು ರಾಜೀನಾಮೆ ನೀಡಬೇಕು. ನಾವು ಒಂದು ವಾರದ ಗಡುವು ನೀಡಿದ್ದೇವೆ ಎಂದು ಅವರು ಹೇಳಿದರು.