ಉಪ್ಪಳ: ಬೇಕೂರು ಸೇವಾಭಾರತಿ ಕಲಾವೃಂದ ಹಾಗೂ ಭಜನಾ ಮಂದಿರದ ರಜತ ಮಹೋತ್ಸವ ಹಾಗೂ ಇದರ ಸನಿನೆನಪಿಗಾಗಿ ನಿರ್ಮಿಸಿರುವ ನೂತನ ಕಟ್ಟಡ ರಜತಾದ್ರಿಯ ಉದ್ಘಾಟನಾ ಸಮಾರಂಭ ಜ.12 ಮತ್ತು 13ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
12ರಂದು ಪ್ರಾತಕಾಲ ಗಣಹೋಮ, ಬೆಳಿಗ್ಗೆ 9.34ಕ್ಕೆ ರಜತಾದ್ರಿಯ ಪ್ರವೇಶೋತ್ಸವ, 10ಕ್ಕೆ ವಿವಿಧ ತಂಡಗಳಿಂದ ಭಜನಾ ಸಂಕೀರ್ತನೆ ಪ್ರಾರಂಭ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದೀಪ ಪ್ರಜ್ವಲನೆಗೊಳಿಸುವರು.
ಸಂಜೆ 6.45ಕ್ಕೆ ಭಜನಾ ಮಂಗಳೋತ್ಸವ, 13ರಂದು ಬೆಳಿಗ್ಗೆ 10ರಿಂದ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 5ಕ್ಕೆ ಕುಣಿತ ಭಜನೆ, 7ರಿಂದ ಬೇಕೂರು ಶಾಲಾ ವಠಾರದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು.
ಐಲ ಕ್ಷೇತ್ರದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು ಅಧ್ಯಕ್ಷತೆ ವಹಿಸುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರಜತ ಸಂಭ್ರಮವನ್ನು ಉದ್ಘಾಟಿಸುವರು ಹಾಗೂ ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ರಾತ್ರಿ 9ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿದ್ಯ, ರಾತ್ರಿ 9.30ರಿಂದ ನಾಟಕ ಪ್ರದರ್ಶನಗೊಳ್ಳಲಿದೆ.