ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ವಿರುದ್ಧ ಕಪೋಲಕಲ್ಪಿತ ಕಥೆಗಳನ್ನು ಕಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಟ್ಟು ಧರ್ಮ ಧರ್ಮಗಳ ಮಧ್ಯೆ ಕೋಮು ಸೌಹಾರ್ದತೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವ ಆರೋಪಿಗಳು ಹಾಗೂ ಒಂದು ಸಾಮಾಜಿಕ ಜಾಲ ತಾಣದ ಗ್ರೂಪ್ ವಿರುದ್ಧ, ಸಹನಾ ಎಸ್ಟೇಟ್ ಮಾಲಿಕ ಸುರೇಂದ್ರ ಶೆಟ್ಟಿ ಎಂಬವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎ.26 ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕೆ. ಜಯಪ್ರಕಾಶ್ ಹೆಗ್ಡೆಯವರ ವಿರುದ್ಧ ಬಿಜೆಪಿ ಪಕ್ಷದವರೆನ್ನಲಾದ ಪ್ರಕಾಶ್ ಹಂದೊಟ್ಟು, ಸಂಜೀತ್ ಕೋಟ್ಯಾನ್, ವಾಸ್ತವ, ಗಾಂಸ್ಕರ್ ಎನ್ ಎನ್ನುವವರು ಹಾಗೂ ಕೇಸರಿ ಬ್ರಿಗೇಡ್ ಎನ್ನುವ ಸಾಮಾಜಿಕ ಜಾಲ ತಾಣದ ಗ್ರೂಪ್ ಒಂದರ ಆರೋಪಿಗಳು ತಮ್ಮ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ 1995 ರಲ್ಲಿ ಬ್ರಹ್ಮಾವರದಲ್ಲಿ ಕೊಲೆಯಾದ ರಾಜಾರಾಮ ಸೇರ್ವೇಗಾರ ಎನ್ನುವವರು ಬಿಜೆಪಿ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಮುಗಿಸಿದ ಪಾಪಿ ರಾಜಕಾರಣಿಗೆ ಬೆಂಬಲವಾಗಿ ನಿಂತ ಮುಸ್ಲಿಂ ಪೋಲೀಸ್ ಅಧಿಕಾರಿ ಯಾರು ? ತುಷ್ಟಿಕರಣ ರಾಜಕಾರಣಿ ಜೆ.ಪಿ ಬೇಕಿಲ್ಲ. ಉಡುಪಿ ಚಿಕ್ಕಮಗಳೂರಿಗೆ, ಹಿಂದುತ್ವದ ಪುಷ್ಠಿ ನೀಡುವ ಬಿಜೆಪಿ ನಮ್ಮ ಆಯ್ಕೆ ಎಂಬ ಸಂದೇಶವನ್ನು ಪ್ರಸಾರ ಮಾಡುತ್ತಿದ್ದಾರೆ. ಆರೋಪಿಗಳು ತಮ್ಮ ಫೇಸ್ ಬುಕ್ ಖಾತೆಯಲ್ಲಿಯೂ ಈ ಸಂದೇಶಗಳನ್ನು ನಿರಂತರವಾಗಿ ರವಾನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ, ಮತ ಗಳಿಸುವ ಉದ್ದೇಶದಿಂದ ಈ ರೀತಿ ಸುಳ್ಳು, ಸಂದೇಶಗಳನ್ನು ರವಾನಿಸುವ ಜೊತೆಯಲ್ಲಿ, ಆರೋಪಿಗಳು ಕೊಲೆಯಾದ ರಾಜಾರಾಮ ಸೇರ್ವೆಗಾರ ಅವರು ಫೋಟೋದೊಂದಿಗೆ ಒಂದು ವಿಡೀಯೋವನ್ನು ಮುದ್ರಿಸಿ ತಮ್ಮ ಫೇಸ್ ಬುಕ್ ಖಾತೆಯಿಂದ ಇತರರಿಗೆ ರವಾನಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ತೇಜೋವಧೆ ಮಾಡಿರುತ್ತಾರೆ ಹಾಗೂ ಈ ರೀತಿಯ ಸಂದೇಶಗಳಿಂದ ಜನರ ಮಧ್ಯೆ ಕೋಮು ಸೌಹಾರ್ದತೆಯನ್ನು ಕೆಡಿಸಿ, ಧರ್ಮ ಧರ್ಮಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡುತ್ತಿರುವುದರಿಂದ ಆರೋಪಿಗಳ ವಿರುದ್ಧ ಹಾಗೂ ಈ ರೀತಿಯ ಸಂದೇಶಗಳನ್ನು ಹರಡುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ನೀಡಿರುವ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ 505(2) ಐಪಿಸಿ, ಕಲಾಂ 66(ಸಿ), 66(ಓ) ಐಟಿ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.