ಉಡುಪಿ: ಜಿಎಸ್‌ಟಿ ಸಣ್ಣ ಕೈಗಾರಿಕೆಗಳಿಗೆ ದೊಡ್ಡ ಹೊಡೆತ ನೀಡುತ್ತಿದೆ. ಸಣ್ಣ ಉದ್ಯಮಿಗಳು ಇದರಿಂದ ತುಂಬಾ ತೊಂದರೆಗೊಳಗಾಗಿದ್ದಾರೆ. ಇದರಿಂದಾಗಿ ಸಾಕಷ್ಟು ಸಣ್ಣ ಕೈಗಾರಿಕೆಗಳು ಮುಚ್ಚುತ್ತಿವೆ. ಈ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಮನ ಹರಿಸಬೇಕಿದೆ. ಸಮಸ್ಯೆ ಇದ್ದಾಗ ಸರಕಾರಗಳು ಸಹಾಯ ಮಾಡಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸಿಡ್ಬಿ, ವಿಟಿಪಿಸಿ, ಕೆನರಾ ಬ್ಯಾಂಕುಗಳ ಸಹಯೋಗದೊಂದಿಗೆ ಬೆಂಗಳೂರಿನ ಕಾಸಿಯಾ(ಕೆಎಎಸ್‌ಎಸ್‌ಐಎ) ಸಹಯೋಗದೊಂದಿಗೆ ನಗರದ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸೂಕ್ಷ್ಮ ಹಾಗೂ ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಬಾರಿಯ ಬಜೆಟ್‌ನಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೆಚ್ಚಿನ ಸವಲತ್ತು ನೀಡಿಲ್ಲ ಎಂಬುದು ನಿಜ. ಆದರೆ ಎಲ್ಲವನ್ನೂ ಬಜೆಟ್ ಮಂಡನೆಯ ವೇಳೆಯೇ ಪ್ರಕಟಿಸಬೇಕೆಂದಿಲ್ಲ. ನಂತರವೂ ಚರ್ಚೆಯ ವೇಳೆ ಬಜೆಟ್‌ಗೆ ಸೇರಿಸಲು ಸಾಧ್ಯವಿದೆ. ಈ ಬಗ್ಗೆ ಸಿಎಂ ಗಮನಕ್ಕೆ ತಂದರೆ ಬಜೆಟ್‌ಗೆ ಉತ್ತರ ನೀಡುವ ವೇಳೆ ಅದನ್ನು ಸೇರಿಸಬಹುದು. ಅಲ್ಲದೇ ಕೈಗಾರಿಕಾ ಕ್ಷೇತ್ರಕ್ಕೆ ನೀಡಿದ ಅನುದಾನವನ್ನೂ ಉಪಯೋಗಿಸಿಕೊಳ್ಳಬಹುದು ಎಂದರು.
ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಪ್ರತೀಕ್ ಬಾಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್, ಸಿಡ್ಬಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪಪ್ರಧಾನ ವ್ಯವಸ್ಥಾಪಕ ಬಿ.ಉಳಗಿಯನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹರೀಶ್ ಕುಂದರ್, ಕಾಸಿಯಾದ ಉಪಾಧ್ಯಕ್ಷ ಎಂ.ಜಿ.ರಾಜಗೋಪಾಲ್, ಕೆನರಾ ಬ್ಯಾಂಕಿನ ಡಿಜಿಎಂ ರಾಜೀವ್ ತುಕ್ರಾಲ್, ಸಂಪನ್ಮೂಲ ವ್ಯಕ್ತಿ ಸಿಎ ಜತಿನ್ ಕ್ರಿಸ್ಟೋಫರ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಸಿಯಾದ ಅಧ್ಯಕ್ಷ ಶಶಿಧರ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾಸಿಯಾದ ಗೌರವ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜು ವಂದಿಸಿದರು.