ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಊರಿನ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ

Share with

ನವದೆಹಲಿ, ನವೆಂಬರ್ 5: ಹಣದಲ್ಲಿ ಶ್ರೀಮಂತರಾದವರು ಮನಸ್ಸಿನಲ್ಲಿ ಶ್ರೀಮಂತರಾಗಬೇಕೆಂದಿಲ್ಲ. ಎರಡರಲ್ಲೂ ಶ್ರೀಮಂತಿಕೆ ಹೊಂದಿರುವವರು ಬಹಳ ಅಪರೂಪ. ಇಂತಹ ಅಪರೂಪರಲ್ಲಿ ಗುಜರಾತ್ನ ಅಮ್ರೇಲಿ ಜಿಲ್ಲೆಯ ಉದ್ಯಮಿ ಬಾಬುಭಾಯ್ ಜೀರಾವಾಲ (Babubhai Jirawala) ಒಬ್ಬರು. ಸ್ವರ್ಗಸ್ಥರಾದ ತನ್ನ ತಾಯಿಯನ್ನು ಖುಷಿಪಡಿಸಲು ಇವರು ತಮ್ಮ ಊರಿನ ಎಲ್ಲಾ ಜನರ ಬ್ಯಾಂಕ್ ಸಾಲವನ್ನು ತೀರಿಸಿದ್ದಾರೆ. ಈ ಮೂಲಕ 30 ವರ್ಷಗಳಿಂದ ಬ್ಯಾಂಕಿಗೆ ಊರಿನ ಜನರು ಅಡಮಾನವಾಗಿ ಇಟ್ಟಿದ್ದ ಜಮೀನು ಪತ್ರವನ್ನು ಅವರಿಗೆ ಮರಳಿ ಸಿಗುವಂತೆ ಮಾಡಿದ್ದಾರೆ.

ಅಮರೇಲಿ ಜಿಲ್ಲೆಯ ಸವರಕುಂಡ್ಲ ತಾಲೂಕಿನ ಜೀರಾ ಗ್ರಾಮದ ಬಾಬುಭಾಯ್ ಜೀರಾವಾಲ ಅವರು ಒಟ್ಟು 290 ರೈತರನ್ನು ಸಾಲಮುಕ್ತರನ್ನಾಗಿಸಿದ್ದಾರೆ. ಇದಕ್ಕಾಗಿ ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ಗೆ 90 ಲಕ್ಷ ರೂ ಹಣವನ್ನು ಕಟ್ಟಿದ್ದಾರೆ. 30 ವರ್ಷಗಳಿಂದ ಸಾಲದ ಬವಣೆಯಲ್ಲಿದ್ದ ರೈತರು ಈಗ ನಿರಾಳಗೊಂಡಿದ್ದಾರೆ.
ಸಾಲ ತೀರಿಸುವುದು ಬಾಬುಭಾಯ್ ಜೀರಾವಾಲರ ಅಮ್ಮನ ಆಸೆಯಾಗಿತ್ತು…
ತಮ್ಮ ಊರಿನ ಜನರು ಸಾಲದ ಕಾರಣದಿಂದ ಕಷ್ಟಪಡುವುದನ್ನು ಕಂಡು ಬಾಬುಭಾಯ್ ಜೀರಾವಾಲ ಅವರ ತಾಯಿ ಸದಾ ಕೊರಗುತ್ತಿದ್ದರಂತೆ. ತಮ್ಮ ಬಳಿ ಇರುವ ಒಡವೆಗಳನ್ನು ಮಾರಿಯಾದರೂ ಊರಿನವರ ಸಾಲ ತೀರಿಸಬೇಕೆಂಬುದು ಅವರ ಆಸೆಯಾಗಿತ್ತು. ಇದು ಸಾಧ್ಯವಾಗುವಷ್ಟರಲ್ಲಿ ಅವರು ಸ್ವರ್ಗಸ್ಥರಾಗಿ ಹೋಗಿದ್ದರು.

ಇದೀಗ ಬಾಬುಭಾಯ್ ಜೀರಾವಾಲ ಅವರು ತಮ್ಮ ತಾಯಿಯ ಆಸೆಯನ್ನು ಈಡೇರಿಸಿದ್ದಾರೆ. ಅವರ ಪುಣ್ಯತಿಥಿಯಂದೇ ಊರಿನವರ ಆ ಸಾಲವನ್ನು ಒಮ್ಮೆಗೇ ತೀರಿಸಿದ್ದಾರೆ. ಜೀರಾ ಸೇವಾ ಸಹಕಾರಿ ಮಂಡಲ ಬ್ಯಾಂಕ್ನಲ್ಲಿ ಜೀರಾ ಗ್ರಾಮದ 299 ರೈತರ ಹೆಸರಿನಲ್ಲಿ ಒಟ್ಟು 89,89,209 ರೂ ಸಾಲ (89.89 ಲಕ್ಷ ರೂ) ಇತ್ತು. ಅಷ್ಟೂ ಸಾಲವನ್ನು ಬಾಬುಭಾಯ್ ತೀರಿಸಿದ್ದಾರೆ. ಎಲ್ಲಾ ರೈತರಿಗೆ ಬ್ಯಾಂಕ್ನಿಂದ ಋಣಮುಕ್ತ ಪ್ರಮಾಣಪತ್ರ ಕೊಡಿಸಿದ್ದಾರೆ. ಈ ಮೂಲಕ 299 ರೈತರು ಹಾಗೂ ಅವರ ಕುಟುಂಬಸ್ಥರ ಮೊಗದಲ್ಲಿ ಮಂದಹಾಸ ತಂದಿದ್ದಾರೆ. ಆ ಮೂಲಕ ತಮ್ಮ ಸ್ವರ್ಗಸ್ಥ ತಾಯಿಯ ಆತ್ಮಕ್ಕೆ ಶಾಂತಿ ಕೂಡ ಕೊಟ್ಟಿದ್ದಾರೆ.


Share with

Leave a Reply

Your email address will not be published. Required fields are marked *