ಅಕ್ಷಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ ವಿಭಾಗದ ಎಲೈಟ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ “ವಾಸ್ತು ವಿನ್ಯಾಸ”ದ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರವನ್ನು ಪುತ್ತೂರು ಸಿವಿಲ್ ಇಂಜಿನಿಯರಿಂಗ್ ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀ ಸತ್ಯ ಗಣೇಶ್
ಎಂ. ಉದ್ಘಾಟಿಸಿ, ವಾಸ್ತು ಶಾಸ್ತ್ರವು ಪ್ರಕೃತಿಗೆ ಹೊಂದಿಕೊಂಡು ಗೃಹ ನಿರ್ಮಾಣ ಹಾಗೂ ಯಾವುದೇ ಸಂಸ್ಥೆಗಳನ್ನು ನಿರ್ಮಿಸಲು ಅನುಸರಿಸ ಬೇಕಾದ ನಿಯಮಗಳು. ಪುರಾತನ ನಾಗರಿಕತೆ ಕಾಲದಿಂದಲೂ ವಾಸ್ತು ಶಾಸ್ತ್ರವನ್ನು ಅನುಸರಿಸಿ ಕೊಂಡು ಬಂದಿದ್ದೇವೆ. ವೈಜ್ಞಾನಿಕವಾಗಿ ವಾಸ್ತು ವಿನ್ಯಾಸ, ವಾಸ್ತು ಶಾಸ್ತ್ರವು ಪ್ರಸ್ತುತ ವಿವಿಧ ಪದವಿಗಳ ಮೂಲಕ ಲಭ್ಯವಿದ್ದು ಬಹಳಷ್ಟು ವ್ಯಾಪ್ತಿ ಪಡೆದ ವಿಷಯ ಎಂದು ಉಲ್ಲೇಖಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷರಾದ ಶ್ರೀಯುತ ಜಯಂತ್ ನಡು ಬೈಲ್ ಮಾತನಾಡಿ ವಾಸ್ತು ಶಾಸ್ತ್ರವು, ಶಾಸ್ತ್ರೀಯ ರೀತಿಯ ಕಟ್ಟಡಗಳನ್ನು ನಿರ್ಮಾಣ ಮಾಡಲು ಮಾರ್ಗದರ್ಶನ ನೀಡುತ್ತದೆ. ವಾಸ್ತುವಿನ್ಯಾಸ ಕ್ಷೇತ್ರವು ಬಹಳಷ್ಟು ಉದ್ಯೋಗಾವಕಾಶ ಕಲ್ಪಿಸುವ ವಲಯವಾಗಿದ್ದು, ಮಾತ್ರವಲ್ಲದೆ ಸ್ವ-ಉದ್ಯೋಗ ಮಾಡಿಕೊಳ್ಳಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ಪ್ರಸನ್ನ ಭಟ್ ಮುಳಿಯಾಲ ವಾಸ್ತು ಶಾಸ್ತ್ರವು, ಶಾಸ್ತ್ರೀಯ ಮತ್ತು ವೈಜ್ಞಾನಿಕವಾಗಿ ಕಟ್ಟಡ ಗಳನ್ನು ನಿರ್ಮಿಸಲು ಬೇಕಾದ ಮೂಲಭೂತ ಅಂಶಗಳನ್ನು ತಿಳಿಸುತ್ತದೆ. ಶಾಸ್ತ್ರೀಯ ಕ್ರಮದಲ್ಲಿ ಕಟ್ಟಡಗಳ ರಚನೆ ಮತ್ತು ವಿನ್ಯಾಸವು ವ್ಯಕ್ತಿಯ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪ್ರಭಾವ ಬೀರುತ್ತದೆ. ಪ್ರಕೃತಿಯ ಮತ್ತು ಭೌಗೋಳಿಕ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಗೃಹ, ವಿದ್ಯಾ ಸಂಸ್ಥೆ, ಆರೋಗ್ಯ ಮುಂತಾದ ಸಂಸ್ಥೆಗಳನ್ನು ನಿರ್ಮಾಣ ಮಾಡಬೇಕು ಎಂದು ವಿವರಿಸಿದರು. ಇಂಟೀರಿಯರ್ ಡಿಸೈನ್ ವಿಭಾಗದ ಉಪನ್ಯಾಸಕಿ ಶ್ರೀಮತಿ ಕಾವ್ಯ ಮಲ್ಲಿಕಾರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿ ಆಂತರಿಕ ವಿನ್ಯಾಸ ಪದವಿ ವಿದ್ಯಾರ್ಥಿಗಳಿಗೆ ಧಾರಾಳವಾಗಿ ಉದ್ಯೋಗ ಅವಕಾಶಗಳನ್ನು ಕೊಡಬಲ್ಲ ಕ್ಷೇತ್ರವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರಾದ ಶ್ರೀಯುತ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಎ , ಉಪ ಪ್ರಾಂಶುಪಾಲ ರಾದ ರಕ್ಷಣ್ ಟಿ ಆರ್ ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸುಮಾರು 12 ವಿವಿಧ ಕಾಲೇಜಿನ 127 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಅಂತಿಮ ಪದವಿ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿ ಕೀರ್ತನ್ ಸ್ವಾಗತಿಸಿ, ದ್ವಿತೀಯ ಆಂತರಿಕ ವಿನ್ಯಾಸ ವಿಭಾಗದ ವಿನಾಯಕ್ ವೀರಪ್ಪ ವಂದಿಸಿದರು. ಪ್ರಥಮ ವರ್ಷದ ಕುಮಾರಿ ದೀಕ್ಷಾ ನಿರೂಪಿಸಿದರು.