
ಸಕಲೇಶಪುರ : ತಾಲೂಕಿನ ಬೀದಿ ಬದಿ ಕಳೆದ ಕೆಲವು ತಿಂಗಳಿಂದ ಅಣ್ಣಪ್ಪ ಎಂಬಾತ ತರಕಾರಿ ವ್ಯಾಪಾರ ಮಾಡುತ್ತಿದ್ದು ಎಲ್ಲ ತರಕಾರಿಯನ್ನು ಕೆಜಿಗೆ 40 ರೂಪಾಯಿಯಂತೆ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಜನಸಾಮಾನ್ಯರಿಗೆ ಬಹಳ ಅನುಕೂಲವಾಗಿತ್ತು.

ಆದರೆ ಇದನ್ನು ಸಹಿಸದ ಪುರಸಭೆಯ ಕೆಲ ಸದಸ್ಯರು ಆತನನ್ನು ಒಕ್ಕಲೆಬ್ಬಿಸಲು ಒತ್ತಡ ಹೇರಿದ್ದು ಈ ಹಿನ್ನೆಲೆಯಲ್ಲಿ ವಿಪರೀತ ಕಿರುಕುಳ ನೀಡಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಅಣ್ಣಪ್ಪ ರವರು ತರಕಾರಿ ವ್ಯಾಪಾರ ಮಾಡುವಾಗ ಬಂದ ಪುರಸಭೆಯ ಮುಖ್ಯಾಧಿಕಾರಿ ಮಹೇಶ್ವರಪ್ಪ ಆತನಿಗೆ ಇಲ್ಲ ಸಲ್ಲದ ಒತ್ತಡ ಹೇರಿ ಬೆದರಿಸಿ ತರಕಾರಿ ವ್ಯಾಪಾರಿಯನ್ನು ಸ್ಥಳದಿಂದ ಎತ್ತಂಗಡಿ ಮಾಡಲು ಮುಂದಾಗಿದ್ದರು.
ಈ ವೇಳೆ ಕರವೇ ಪ್ರವೀಣ್ ಶೆಟ್ಟಿ ಬಣದ ರಮೇಶ್ ಪೂಜಾರಿ, ಹಾಜರಿದ್ದ ಕೆಲವು ಪತ್ರಕರ್ತರು, ಸಾರ್ವಜನಿಕರು ಪುರಸಭಾ ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿಗಳು ಸ್ಥಳದಿಂದ ಹಿಂತಿರುಗಿದ್ದಾರೆ ಎಂದು ಹೇಳಲಾಗಿದೆ.




