ಉಪ್ಪಳ: ಜೀಪ್ ಹಾಗೂ ಸ್ಕೂಟರ್ ಮಧ್ಯೆ ಉಂಟಾದ ಅಪಘಾತದಲ್ಲಿ ವಿದ್ಯಾರ್ಥಿ ಮೃತಪಟ್ಟ ಘಟನೆ ಪೈವಳಿಕೆ-ಚೇವಾರ್ ರಸ್ತೆ ಸಂಗಮಿಸುವ ಜಕ್ಷನ್‌ನಲ್ಲಿ ನಡೆದಿದೆ. ಲಾಲ್ಭಾಗ್ ಸಮೀಪದ ಪಾಕ ನಿವಾಸಿ ವ್ಯಾಪಾರಿ ಇಬ್ರಾಹಿಂ ಮೊಯಿದೀನ್‌ರವರ ಪುತ್ರ ವಿದ್ಯಾರ್ಥಿ ಮೊಯಿದೀನ್ ಇಪ್ರಾಝ್ [16] ಮೃತಪಟ್ಟಿದ್ದಾನೆ.


ಈತ ಉಪ್ಪಳ ಕೋಡಿಬೈಲ್ ಎ.ಜೆ.ಐ ತಹಾನಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಶನಿವಾರ ರಾತ್ರಿ 10.30ರ ವೇಳೆ ಮನೆಯಿಂದ ಬಾಯಿಕಟ್ಟೆ ಸಮೀಪದ ಮಸೀದಿಯಲ್ಲಿರುವ ಉಸ್ತಾದ್‌ರವರಿಗೆ ಸ್ಕೂಟರ್‌ನಲ್ಲಿ ಊಟ ಕೊಂಡೊಯ್ಯುತ್ತಿದ್ದಾಗ ಮನೆಯ ಅಲ್ಪ ದೂರದ ಪೈವಳಿಕೆ-ಚೇವಾರು ರಸ್ತೆ ಜಂಕ್ಷನ್‌ಗೆ ತಲುಪುತ್ತಿದ್ದಂತೆ ಎದುರಿನಿಂದ ಆಗಮಿಸಿದ ಜೀಪ್ ದಿಡೀರನೆ ಚೇವಾರು ರಸ್ತೆ ತಿರುಗಿಸುವ ವೇಳೆ ಸ್ಕೂಟರ್ ನಿಯಂತ್ರಣ ತಪ್ಪಿ ಜೀಪಿನ ಒಂದು ಬದಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.
ಇದರಿಂದ ಸವಾರ ವಿದ್ಯಾರ್ಥಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ. ಮೃತನು ತಂದೆ, ತಾಯಿ ಫಾತಿಮ್ಮ, ಸಹೋದರ ಸಹೋದರಿಯರಾದ ಇಫಾತ್, ಇಫ್ಲಾಹ್, ಇಪ್ತಹ್, ಅಬೂಬಕ್ಕರ್, ಇಮ್ನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಪಘಾತಕ್ಕೆ ಸಂಬಂಧಿಸಿ ಮಂಜೇಷ್ವರ ಪೊಲೀಸರು ಜೀಪ್ ಚಾಲಕನ ವಿರುದ್ದ ಕೇಸು ದಾಖಲಿಸಿದ್ದಾರೆ. ದೇರಳಕಟ್ಟೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಅಂತ್ಯಸಂಸ್ಕಾರ ನಡೆಯಿತು.




