ಕಾಸರಗೋಡು: ಕಾರು ಡಿಕ್ಕಿ ಹೊಡೆದು ತನ್ನ ಆಟೋ ರಿಕ್ಷಾದಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡಿರುವುದನ್ನು ಕಂಡ ಚಾಲಕ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬೇತೂರುಪಾರ ಸಮೀಪದ ಪಳ್ಳಿಂಜಿ ನಿವಾಸಿ ದಿ| ಶೇಖರನ್ ನಾಯರ್ ಅವರ ಪುತ್ರ ಕೆ. ಅನೀಶ್ (40) ಆತ್ಮಹತ್ಯೆ ಮಾಡಿಕೊಂಡವರು.
ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಮೂವರು ವಿದ್ಯಾರ್ಥಿಗಳನ್ನು ಕರೆದುಕೊಂಡು ಅನೀಶ್ ತನ್ನ ರಿಕ್ಷಾದಲ್ಲಿ ಹೋಗುತ್ತಿದ್ದ ದಾರಿಯಲ್ಲಿ ಹಿಂದಿನಿಂದ ಬಂದ ಕಾರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತು. ರಿಕ್ಷಾದ ಹಿಂಭಾಗ ನಜ್ಜುಗುಜ್ಜಾಗಿತ್ತಲ್ಲದೆ ಅದರಲ್ಲಿದ್ದ ಪ್ಲಸ್ ವನ್ ತರಗತಿಯ ವಿದ್ಯಾರ್ಥಿಗಳಾದ ಪಳ್ಳಂಜಿಯ ಶ್ರೀಹರಿ, ಅತುಲ್ ಮತ್ತು ಆದರ್ಶ್ ಗಾಯಗೊಂಡಿದ್ದರು. ಅವರನ್ನು ತತ್‌ಕ್ಷಣ ಚೆಂಗಳದ ಇ.ಕೆ. ನಾಯನಾರ್ ಆಸ್ಪತ್ರೆಗೆ ದಾಖಲಿಸಲಾಯಿತು. ವಿದ್ಯಾರ್ಥಿಗಳಿಗಾದ ಗಾಯ ಗಂಭೀರವಾಗಿರಲಿಲ್ಲ. ಆದರೆ ಅವರ ಸ್ಥಿತಿ ಗಂಭೀರವಾಗಿದೆಯೆಂದು ತಪ್ಪಾಗಿ ತಿಳಿದುಕೊಂಡ ಚಾಲಕ ರಿಕ್ಷಾದಲ್ಲಿದ್ದ ಆ್ಯಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರು ಚಲಾಯಿಸುತ್ತಿದ ಕಾಲೇಜೊಂದರ ಅಧ್ಯಾಪಕ ಬೆನೆಟ್ ಕೂಡ ಗಾಯಗೊಂಡಿದ್ದಾರೆ. ಬೇಡಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




