ಉಡುಪಿ: ಬಡಗುತಿಟ್ಟಿನ ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಿಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು, ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು.
ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದ ರಂಗಮಂಚವೇರಿದವರು ಯಶಸ್ಸಿನ ಶಿಖರ ತಲುಪಿದ್ದರು. 1957 ರಲ್ಲಿ ಗೋಕರ್ಣದಲ್ಲಿ ಜನಿಸಿದ್ದ ಅವರು ಸಂಗೀತಾಭ್ಯಾಸ ಮಾಡಿ ಕಾರ್ಯಕ್ರಮ ನೀಡುತ್ತಿದ್ದರು. ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದರು. ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.