ಅಡಕೆಗೆ ತಗಲುವ ರೋಗಬಾಧೆ ನಿರ್ವಹಣೆಗೆ ಸಹಾಯಧನ: ಸಚಿವ ರಾಮಲಿಂಗಾರೆಡ್ಡಿ

Share with

ಸುವರ್ಣವಿಧಾನಸೌಧ: ಕೊಳೆರೋಗಕ್ಕೆ ತುತ್ತಾದ ಅಡಕೆ ಬೆಳೆಗೆ ತೋಟಗಾರಿಕಾ ಇಲಾಖೆಯಿಂದ ಪರಿಹಾರ ನೀಡುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಅಡಕೆಗೆ ತಗಲುವ ರೋಗಬಾಧೆ ನಿರ್ವಹಣೆಗೆ ಸಹಾಯಧನ ಕೊಡುವುದಾಗಿ ಹೇಳಿದರು.

ಬಿಜೆಪಿಯ ಗುರುರಾಜ್ ಗಂಟಿಹೊಳೆ ಪ್ರಶ್ನೆಗೆ ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಪರವಾಗಿ ಉತ್ತರಿಸಿದ ಅವರು, ಅಡಕೆ ಬೆಳೆಗೆ ಬಾಧಿಸುವ ಎಲೆಚುಕ್ಕೆ ರೋಗ, ಹಳದಿ ಎಲೆ ರೋಗ, ಕೊಳೆ ರೋಗಗಳ ನಿರ್ವಹಣೆಗಾಗಿ ರೋಗ ಬಾಧಿತ ಸಸ್ಯ ಭಾಗ ತೆಗೆಯುವುದು, ಸಸ್ಯಸಂರಕ್ಷಣಾ ಕ್ರಮ ಹಾಗೂ ಪೋಷಕಾಂಶಗಳ ಸಮಗ್ರ ನಿರ್ವಹಣೆಗಳ ಸಹಾಯಧನಕ್ಕಾಗಿ 577.76 ಕೋಟಿ ರೂ. ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.

ಎಂಐಡಿಎಚ್‌ ಮಾರ್ಗಸೂಚಿ ಅನ್ವಯ ಶೇ.30ರ ಸಹಾಯಧನದಂತೆ ಕೇಂದ್ರದ ಪಾಲು 103.99 ಕೋಟಿ ರೂ. ಹಾಗೂ ರಾಜ್ಯದ ಪಾಲು 69.33 ಕೋಟಿ ರೂ. ಸೇರಿ ಒಟ್ಟು 173.32 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದರು.

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಅಡಕೆ ಹಾಗೂ ತೆಂಗು ಬೆಳೆ ಸೇರಿ ಇತರೆ ತೋಟಗಾರಿಕಾ ಬೆಳೆಗಳ ಸಮಗ್ರ ನಿರ್ವಹಣೆಗೆ 5 ಸಾವಿರ ರೂ. ಪ್ರತಿ ಹೆಕ್ಟೇ‌ರ್ ಘಟಕ ವೆಚ್ಚದಲ್ಲಿ ಶೇ.30 ರಂತೆ ಪ್ರತಿ ಹೆಕ್ಟೇರ್ ಗೆ 1500 ರೂ. ಗಳಂತೆ 2 ಹೆಕ್ಟೇ‌ರ್ ವರೆಗೆ 3000 ರೂ. ಸಹಾಯಧನ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯ 12,757 ಹೆಕ್ಟೇ‌ರ್ ಅಡಿಕೆ ಬೆಳೆಯಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, 53.88 ಕೋಟಿ ರೂ. ನಷ್ಟವಾಗಿರುವ ಅಂದಾಜಿದೆ. ಸಹಾಯನಧನದಡಿ ಉಡುಪಿ ಜಿಲ್ಲೆಗೆ ಒಟ್ಟು 21 ಲಕ್ಷ ರೂ. ಅನುದಾನ ನಿಗದಿಯಾಗಿದ್ದು, 546 ರೈತರಿಗೆ 19.75 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಆದರೆ, ಪರಿಹಾರ ನೀಡುವ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಡಕೆ, ತೆಂಗು ಮಾತ್ರವಲ್ಲದೆ, ನಮ್ಮ ಭಾಗದಲ್ಲಿ ಶುಂಠಿ, ಮೆಣಸು, ಕಾಫಿ ಬೆಳೆಗೂ ಸಮಸ್ಯೆ ಇದೆ. ಅದಕ್ಕೂ ಪರಿಹಾರ ನೀಡಬೇಕು ಎಂದು ಬಿಜೆಪಿಯ ಸಿಮೆಂಟ್ ಮಂಜು ಆಗ್ರಹಿಸಿದ್ದರೆ, ಅಡಕೆಯನ್ನು ವಾಣಿಜ್ಯ ಬೆಳೆ ಪ್ರವರ್ಗದಿಂದ ತೆಗೆದು ಕೃಷಿ ಬೆಳೆ ಎಂದು ಪರಿಗಣಿಸುವಂತೆ ಕಾಂಗ್ರೆಸ್ ನ ಅಶೋಕ್ ರೈ ಒತ್ತಾಯಿಸಿದರು.


Share with

Leave a Reply

Your email address will not be published. Required fields are marked *