ಬೆಳಗಾವಿ: ಕೊಲ್ಲಾಪುರ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸಂಸ್ಕಾರ ವಿಭಾಗದ ವೈದ್ಯರು, ರೋಗಿ ಕೊಳಲು ನುಡಿಸುತ್ತಾ, ಮಾತನಾಡುತ್ತಿರುವಾಗಲೇ ಅತ್ಯಂತ ಕ್ಲಿಷ್ಟಕರವಾದ ಮಿದುಳಿನ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಮಿದುಳು ಕ್ಯಾನ್ಸರ್ (ಬ್ರೇನ್ ಟ್ಯೂಮರ್)ನಿಂದ ಬಳಲುತ್ತಿದ್ದ ವ್ಯಕ್ತಿಯ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸುವಾಗ ಮಿದುಳಿಗೆ ಅರಿವಳಿಕೆ ನೀಡಿರಲಿಲ್ಲ. ಹೀಗಾಗಿ ರೋಗಿ ಸಂಪೂರ್ಣವಾಗಿ ಪ್ರಜ್ಞಾ ಸ್ಥಿತಿಯಲ್ಲೇ ಇದ್ದರು. ಕೇವಲ ಮಿದುಳಿನ ಭಾಗದ ಹೊರಭಾಗದಲ್ಲಿ ಮಾತ್ರ ಅರಿವಳಿಕೆ ನೀಡಲಾಗಿತ್ತು. ಐದು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ವೇಳೆ ರೋಗಿ ನಿರಂತರವಾಗಿ ಮಾತನಾಡುತ್ತಿದ್ದರು.
ಕೊಳಲು ನುಡಿಸುತ್ತಿದ್ದರು. ಶಸ್ತ್ರಚಿಕಿತ್ಸೆಯಾದ ಬಳಿಕ ಸಂಪೂರ್ಣ ಗುಣಮುಖರಾಗಿದ್ದರು ಎಂದು ಸಿದ್ಧಗಿರಿ ಆಸ್ಪತ್ರೆಯ ಖ್ಯಾತ ನರ ಶಸ್ತ್ರಚಿಕಿತ್ಸಕ ಡಾ| ಶಿವಶಂಕರ ಮರಜಕ್ಕೆ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಸ್ತ್ರಚಿಕಿತ್ಸೆ ಕುರಿತು ಮಾಹಿತಿ ನೀಡಿದ ಅವರು, ಹಳ್ಳಿ ಭಾಗದಲ್ಲಿ ಇಂಥ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ
ಮಾಡಿರುವ ದೇಶದ ಕೆಲವೇ ಆಸ್ಪತ್ರೆಗಳಲ್ಲಿ ಇದೂ ಒಂದು. ಬೇರೆ ಕಡೆಗೆ ಇದಕ್ಕೆ 10ರಿಂದ 15 ಲಕ್ಷ ರೂ. ವೆಚ್ಚ ಆಗುತ್ತದೆ. ನಮ್ಮಲ್ಲಿ ಕೇವಲ 1.20 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.