ರಾಯಚೂರ: ಕ್ಷುಲ್ಲಕ ಕಾರಣಕ್ಕೆ ಗಂಡ- ಹೆಂಡತಿ ನಡುವೆ ನಡೆದ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ನಡೆದಿದೆ.
ಕವಿತಾ (26) ಕೊಲೆಯಾದ ಯುವತಿ. ಭೀಮಣ್ಣ (28) ಎಂಬಾತ ಪತ್ನಿಯನ್ನು ಕೊಂದು ನೇಣಿಗೆ ಶರಣಾಗಿದ್ದಾನೆ. ಕವಿತಾ ಹಾಗೂ ಭೀಮಣ್ಣ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ಭೀಮಣ್ಣ ಪತ್ನಿ ಕವಿತಾಳನ್ನು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದನು. ಆಕೆಯ ಮೇಲೆ ಶಂಕಿಸಿದ್ದು, ಇದೇ ವಿಚಾರಕ್ಕೆ ಪದೇಪದೆ ಪತ್ನಿ ಜತೆ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ಇದೇ ವಿಚಾರಕ್ಕೆ ಗಲಾಟೆ ನಡೆದು ಕೋಪದಲ್ಲಿ ಭೀಮಣ್ಣ ಕಲ್ಲಿನಿಂದ ಕವಿತಾಳನ್ನು ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆಕೆ ಮೃತಪಟ್ಟ ಕೂಡಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಳಗಾನೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ಬಳಗಾನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.